ಬೆಂಗಳೂರು, ನ.20 www.bengaluruwire.com : ಕೇರಳ ರಾಜ್ಯದಲ್ಲಿ ‘ನೇಗೇರಿಯಾ ಫೌಲೇರಿ’ (Naegleria fowleri) ಎಂಬ ‘ಮಿದುಳು ತಿನ್ನುವ ಅಮೀಬಾ’ದಿಂದ ಉಂಟಾಗುವ ‘ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್’ (Amoebic meningoencephalitis) ಪ್ರಕರಣಗಳು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಶಬರಿಮಲೆ ಯಾತ್ರೆ ಕೈಗೊಳ್ಳುವ ರಾಜ್ಯದ ಯಾತ್ರಿಕರಿಗೆ ಸುರಕ್ಷತಾ ಸಲಹಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಕುರಿತು ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ಮತ್ತು ಸೋಂಕು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಆಯುಕ್ತರು ತಿಳಿಸಿದ್ದಾರೆ.
ಪ್ರಮುಖ ಮುನ್ನೆಚ್ಚರಿಕಾ ಕ್ರಮಗಳು:

* ಸೋಂಕಿನ ಮೂಲ ಮತ್ತು ಹರಡುವಿಕೆ:
ನೇಗೇರಿಯಾ ಫೌಲೇರಿ ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಮತ್ತು ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆಗೆ ನಿಂತ ನೀರು, ಕೊಳಗಳು, ಈಜುಕೊಳಗಳು ಮತ್ತು ಕೆರೆಗಳು.
ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ, ಹಾಗೂ ಕಲುಷಿತ ನೀರನ್ನು ಕುಡಿಯುವುದರಿಂದಲೂ ಹರಡುವುದಿಲ್ಲ.
ಸೋಂಕು ತಡೆಗಟ್ಟುವ ವಿಧಾನ:
* ನೇಗೇರಿಯಾ ಫೌಲೇರಿ ಅತ್ಯಂತ ವಿಷಕಾರಿ ಸೂಕ್ಷ್ಮಜೀವಿಯಾಗಿದ್ದು, ಕಲುಷಿತಗೊಂಡ ನೀರು ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಿ, ಅಪರೂಪದ ಮತ್ತು ಮಾರಣಾಂತಿಕ ಕಾಯಿಲೆಯಾದ ‘ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್’ ಅನ್ನು ಉಂಟುಮಾಡುತ್ತದೆ.
ಆದ್ದರಿಂದ, ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ಅಥವಾ ಮುಳುಗುವಾಗ ಮೂಗಿನ ಕ್ಲಿಪ್‌ಗಳನ್ನು ಬಳಸುವುದು ಅಥವಾ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿಯುವುದರ ಮೂಲಕ ನೀರು ಮೂಗಿಗೆ ಪ್ರವೇಶಿಸದಂತೆ ತಡೆಯುವ ಮುನ್ನೆಚ್ಚರಿಕೆ ವಹಿಸಬೇಕು.
ರೋಗಲಕ್ಷಣಗಳು ಮತ್ತು ಚಿಕಿತ್ಸೆ:
* ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಯಾತ್ರಿಕರಲ್ಲಿ ಜ್ವರ, ತೀವ್ರ ತಲೆನೋವು, ವಾಕರಿಕೆ/ವಾಂತಿ, ಕುತ್ತಿಗೆ ಬಿಗಿತ, ಗೊಂದಲ/ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಅಥವಾ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆಯಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ನಿರ್ಲಕ್ಷಿಸದೆ ತುರ್ತು ವೈದ್ಯಕೀಯ ಆರೈಕೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸಬೇಕು. (Photo Credit : AdobeStock)






















