ಬೆಂಗಳೂರು, ನ. 19 www.bengaluruwire.com : ರಾಜ್ಯದಲ್ಲಿ ಹೆಚ್ಚುತ್ತಿರುವ ಜಲ ಮಾಲಿನ್ಯವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನರೇಂದ್ರಸ್ವಾಮಿ, ಬಹುತೇಕ ಜಿಲ್ಲೆಗಳಲ್ಲಿ ತ್ಯಾಜ್ಯ ನೀರು ನಿರ್ವಹಣಾ ಘಟಕಗಳು (STP) ಸರಿಯಾಗಿ ಕಾರ್ಯನಿರ್ವಹಿಸದೆ ಕೊಳಚೆ ನೀರು ನದಿಗಳನ್ನು ಸೇರುತ್ತಿದೆ. ಇದನ್ನು ತಡೆಯಲು ಎಲ್ಲಾ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಸಿಎಂಗೆ ಒತ್ತಾಯಿಸಿದರು. ಜಲ ಮಾಲಿನ್ಯ ತಡೆಯಲು ಮಂಡಳಿಯು ರಾಜ್ಯದಲ್ಲಿರುವ ನದಿ ನೀರು ಮಾಪನ ಕೇಂದ್ರಗಳನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಅಲ್ಲದೆ, ದಕ್ಷಿಣ ಕನ್ನಡದಲ್ಲಿ ತ್ಯಾಜ್ಯದಿಂದ ರಸ್ತೆ ನಿರ್ಮಿಸುವ ಮಾದರಿಯಂತೆ, ಎಲ್ಲಾ ಜಿಲ್ಲೆಗಳಲ್ಲೂ ತ್ಯಾಜ್ಯದ ಸಮರ್ಪಕ ಮರುಬಳಕೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು. ದಾವಣಗೆರೆ ಜಿಲ್ಲೆಯಲ್ಲಿ ಗೃಹ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಸಂಸ್ಕರಿಸುತ್ತಿರುವುದು ಮಾದರಿಯಾಗಿದ್ದು, ಎಲ್ಲಾ ಜಿಲ್ಲೆಗಳು ಏಕ ಬಳಕೆ ಪ್ಲಾಸ್ಟಿಕ್ ಮುಕ್ತವಾಗಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಕೋರಿದರು.
ವರ್ತುಲ ಅರ್ಥವ್ಯವಸ್ಥೆ ಮತ್ತು ಸುಸ್ಥಿರತೆ ಕುರಿತ ವಿಚಾರ ಸಂಕಿರಣದ ಸಲಹೆಗಳ ಆಧಾರದ ಮೇಲೆ ತ್ಯಾಜ್ಯ ಕಡಿಮೆ ಮಾಡಿ, ಪುನರ್ಬಳಕೆ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಂಡಳಿಯನ್ನು ಹಳ್ಳಿ ಹಳ್ಳಿಗೆ ಕೊಂಡೊಯ್ಯುವುದು ಸುವರ್ಣ ಮಹೋತ್ಸವದ ಮುಖ್ಯ ಉದ್ದೇಶವಾಗಿತ್ತು.

ಈ ಸಂದರ್ಭದಲ್ಲಿ, ಮಂಡಳಿ ಸ್ಥಾಪನೆಗೆ ಕಾರಣರಾದ ಇಂದಿರಾ ಗಾಂಧಿಯವರ ಪರಿಸರ ಸಂರಕ್ಷಣಾ ಕಾಯ್ದೆಗಳು (ವನ್ಯಜೀವಿ ಸಂರಕ್ಷಣಾ ಕಾಯಿದೆ – 1972, ಜಲ ಮಾಲಿನ್ಯ ನಿಯಂತ್ರಣ ಕಾಯಿದೆ – 1974, ವಾಯು ಮಾಲಿನ್ಯ ನಿಯಂತ್ರಣ ಕಾಯಿದೆ – 1981) ಮತ್ತು ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಕೊಡುಗೆಗಳನ್ನು ಸ್ಮರಿಸಲಾಯಿತು.
ಪರಿಸರ ಸಂರಕ್ಷಣೆಗೆ ಶ್ರಮಿಸಿದ ಸಾಧಕರಿಗೆ ರಾಜ್ಯ ಮಟ್ಟದಲ್ಲಿ ಐವರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಐವರಿಗೆ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಲಾಯಿತು.
ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ಪರಿಸರ ಪ್ರಶಸ್ತಿ:
ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿ ಪ್ರತಿ ವರ್ಷ ಪರಿಸರ ಸಂರಕ್ಷಣೆ ಮಾಡುವ ಸಾಧಕರಿಗೆ ಪ್ರಶಸ್ತಿ ನೀಡಲು ದತ್ತಿ ನಿಧಿ ಸ್ಥಾಪಿಸುವಂತೆ ನರೇಂದ್ರಸ್ವಾಮಿ ಅವರು ಮಾಡಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕವಾಗಿ ಅನುಮೋದನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಶಾಸಕರು ಉಪಸ್ಥಿತರಿದ್ದರು.






















