ಬೆಂಗಳೂರು, ನ.18 www.bengaluruwire.com : ಕಾಶ್ಮೀರದ ಭಯೋತ್ಪಾದಕರ ದಾಳಿಯ ಬಳಿಕ ಬಸವಳಿದಿರುವ ಪೆಹಲ್ಗಾಮ್ ನಲ್ಲಿ ದೇಶಾದ್ಯಂತ ಪ್ರವಾಸಿಗರು ಪುನಃ ಈ ಪ್ರವಾಸಿ ತಾಣಕ್ಕೆ ಯಾವುದೇ ಭಯವಿಲ್ಲದೆ ಹೋಗಬೇಕು ಎಂಬ ಸಂದೇಶ ರವಾನಿಸಲು ಕೆಚ್ಚೆದೆಯ ಕನ್ನಡಗರ ಪರವಾಗಿ ಸಂದೇಶ ರವಾನಿಸಲು ಜಿಬಿಎ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ನ.22ರಂದು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಹಾಗೂ ದುರ್ಘಟನೆಯಲ್ಲಿ ಹತರಾದವರಿಗೆ ನುಡಿನಮನ ಕಾರ್ಯಕ್ರಮ ಆಯೋಜಿಸಿದೆ.
ಜಿಬಿಎ ನೌಕರರ ಭವನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಮಾರಂಭದ ಕುರಿತು ಪೋಸ್ಟರ್ ಬಿಡುಗಡೆ ಮಾಡಿ, ಸಮಾರಂಭದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್, ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಯಿಂದ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ಈ ಹಿನ್ನಲೆಯಲ್ಲಿ ಅಲ್ಲಿನ ಸ್ಥಳೀಯರಿಗೆ ಬೆಂಬಲವಾಗಿ ಹಾಗೂ ಸ್ವಾಭಿಮಾನಿ ಕನ್ನಡಿಗರ ಪರವಾಗಿ, ಪೆಹಲ್ಗಾಮ್ ಪ್ರವಾಸಿ ತಾಣಕ್ಕೆ ಪುನಃ ಪ್ರವಾಸಿಗರು ಭಯವಿಲ್ಲದೆ ಮುಕ್ತವಾಗಿ ಬರುವಂತಾಗಬೇಕು ಎಂಬ ಸಂದೇಶ ರವಾನಿಸಲು ರಾಷ್ಟ್ರೀಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಪಹಲ್ಗಾಮ್ ಹತ್ಯೆಯಾದ ಭಾರತಾಂಬೆ ಮಕ್ಕಳಿಗೆ ನುಡಿ ನಮನ ಕಾರ್ಯಕ್ರಮ ಹಾಗೂ ಕರುನಾಡ ಸಾಧಕರು ಪ್ರಶಸ್ತಿ ಪ್ರಧಾನ ಏರ್ಪಡಿಸಲಾಗಿದೆ ಎಂದರು.

ನ.22 ರಂದು ಸಂಜೆ ಮೂರು ಗಂಟೆಯಿಂದ ಕಾರ್ಯಕ್ರಮ ಆರಂಭವಾಗಿ ನಾಲ್ಕು ಗಂಟೆಯ ತನಕ ಕಾರ್ಯಕ್ರಮ ನಡೆಯಲಿದೆ. ಅಲ್ಲಿನ ವಾತಾವರಣ ಮೈನಸ್ ಡಿಗ್ರಿ ತನಕ ಇಳಿಕೆಯಾಗುತ್ತದೆ. ಹೀಗಾಗಿ ಕಾರ್ಯಕ್ರಮದ ಅವಧಿಯನ್ನು ಕಡಿತ ಮಾಡಲಾಗಿದೆ.


ಮೊದಲಿಗೆ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಮಡಿದವರಿಗಾಗಿ ಪಹಲ್ಗಾಮ್ ನಲ್ಲಿನ ರಾಷ್ಟ್ರೀಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದೆ. ಶ್ರೀನಗರದ ಅನಂತನಾಗ್ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಪೊಲೀಸ್ ಭದ್ರತೆಗಾಗಿ ಮನವಿ ಮಾಡಿದ್ದೇವೆ. ಅವರಿಂದ ಸ್ಪಂದನೆ ದೊರೆತಿದೆ.
ಸಾಕಷ್ಟು ತಂಪನೆಯ ವಾತಾವರಣವಿರುವುದರಿಂದ ಪಹೆಲ್ಗಾಮ್ ನಲ್ಲಿನ ಕ್ಲಬ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇತ್ತೀಚೆಗೆ ಶ್ರೀನಗರದ ಪೊಲೀಸ್ ಠಾಣೆಯಲ್ಲಿ ದುಷ್ಕೃತ್ಯ ನಡೆದುದರಿಂದ ಶ್ರೀನಗರ ಏರ್ ಪೋರ್ಟ್ ನಿಂದ ಪೆಹಲ್ಗಾಮ್ ತನಕ ಸಾವಿರಾರು ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಭಯೋತ್ಪಾದಕ ದಾಳಿಯಿಂದ ಪೆಹಲ್ಗಾಮ್ ನಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿನ ಪರಿಸ್ಥಿತಿಯು ಮೊದಲಿನಂತೆ ಪ್ರವಾಸಿಗರಿಂದ ತುಂಬಿ ತುಳುಕಬೇಕು. ಇಲ್ಲಿ ಕನ್ನಡದ ಕಂಪು ಹರಿಸಬೇಕು ಎಂಬ ಸದುದ್ದೇಶದಿಂದ ಹಗಲಿರುಳು ಸಂಘದ ಕಾರ್ಯಕರ್ತರು ಶ್ರಮಿಸಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ರಾಜ್ಯದಿಂದ ವಿಶೇಷ ಅಡುಗೆ ತಂಡ :
ಸಂಘದ ಸದಸ್ಯರು ಹಾಗೂ ಅವರ ಕುಟುಂಬದವರು ಪೆಹಲ್ಗಾಮ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರಿಗೆಲ್ಲಾ ಕರ್ನಾಟಕದ ಸಸ್ಯಹಾರ ಹಾಗೂ ಮಾಂಸಹಾರ ಊಟ ಬಡಿಸಲು ರಾಜ್ಯದಿಂದಲೇ ಬಾಣಸಿಗರ ತಂಡವನ್ನು ಈಗಾಗಲೇ ಪೆಹಲ್ಗಾಮ್ ಗೆ ವಿಮಾನದಲ್ಲಿ ಕಳುಹಿಸಿಕೊಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಈಗಾಗಲೇ ಅಂತಿಮ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಅಮೃತ್ ರಾಜ್ ಹೇಳಿದರು.
ಕನ್ನಡ ಭಾಷೆ ಉಳಿಸಿ, ಬೆಳಸಬೇಕು ವಿಶ್ವಭಾಷೆಯಾಗಿ ಮಾಡಬೇಕು ಉದ್ದೇಶದಿಂದ ಪ್ರಥಮ ಬಾರಿಗೆ 2022ರಲ್ಲಿ ಕಾಶಿಯಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ 2023ರಲ್ಲಿ ನೇಪಾಳದ ಪಶುಪತಿ ದೇವಾಲಯ ಸನ್ನಿಧಾನದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮತ್ತು 2024ರಲ್ಲಿ ಹರಿದ್ವಾರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಬಿಎ ಅಧಿಕಾರಿ, ನೌಕರರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಖ್ಯಾತ ಹಿನ್ನಲೆ ಗಾಯಕಿ ಅನುರಾಧ ಭಟ್ ರವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಉದ್ಘಾಟನೆಗೆ ಗಣ್ಯರ ದಂಡು :
ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಆರ್.ಸಂಪತ್ ರಾಜ್ ರವರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿರವರು, ಮಾಜಿ ಮಹಾಪೌರರಾದ ಎಂ.ಗೌತಮ್ ಕುಮಾರ್, ಬೆಂಗಳೂರು ದೂರದರ್ಶನ ಕೇಂದ್ರದ ಮುಖ್ಯಸ್ಥರಾದ ಆರತಿ ಹೆಚ್.ಎನ್ ಮತ್ತು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗರವರು, ವಕೀಲರಾದ ವಿ.ಶ್ರೀನಿವಾಸ್ ರವರು ಕಾರ್ಯಕ್ರಮ ಉದ್ಘಾಟನೆ ನೇರವೆರಿಸುವರು.
ನಮ್ಮ ಸಂಘದ ಪಹಲ್ಲಾಮ್ ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಡಳಿತಧಿಕಾರಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತರಾದ ಮಹೇಶ್ವರರಾವ್ ಅವರು ಸಂಪೂರ್ಣಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಕೆ.ಜಿ.ರವಿ, ಕೆ.ಮಂಜೇಗೌಡ, ಹೆಚ್.ಬಿ.ಹರೀಶ್ , ಮಾರ್ಕಟ್ ಮಂಜುನಾಥ್, ಎಸ್.ಜಿ.ಸುರೇಶ್ ಸಂತೋಷ್ ಕುಮಾರ್ ನಾಯ್ಕ್, ಎಸ್.ಎನ್.ಸೋಮಶೇಖರ್ , ಎಲ್.ಆರ್, ಮಂಜುನಾಥ್, ನರಸಿಂಹ, ಶ್ರೀಧರ್, ಡಾ.ಶೋಭ, ರೇಣುಕಾಂಬ, ವಾಣಿ , ಮಹದೇವಿ, ಅಕ್ಕಮಹದೇವಿರವರು ಉಪಸ್ಥಿತರಿದ್ದರು.























