ಬೆಂಗಳೂರು, ನ.18 www.bengaluruwire.com : ನಗರದ ಸುಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯುವ ದೊಡ್ಡ ಗಣೇಶ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗಿಂತ ಸ್ಥಳೀಯರಲ್ಲದ, ಅನ್ಯ ವಸ್ತುಗಳನ್ನು ಮಾರುವ ಬೀದಿ ವ್ಯಾಪಾರಿಗಳನ್ನು ಮುಜರಾಯಿ ಇಲಾಖೆ ಅಧಿಕಾರಿಗಳು ಬೇರೆ ಕಡೆ ಸ್ಥಳಾಂತರಿಸಿ, ಆ ಜಾಗದಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ವ್ಯಾಪಾರಿಗಳ ಸೋಗಿನಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರು ಕಡಲೆಕಾಯಿ ಅಂಗಡಿಗಳ ಜಾಗಗಳನ್ನು ಆಕ್ರಮಿಸಿಕೊಂಡರಾ? ಪೊಲೀಸ್ ಇಲಾಖೆ, ಮುಜರಾಯಿ ಇಲಾಖೆ ಹಾಗೂ ನಗರ ಪಾಲಿಕೆ ಏನು ಮಾಡುತ್ತಿದೆ? ಎಂದು ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದ ಸೋಮವಾರ (ನ.17) “BW Special | ಇದು, ಬೆಂಗಳೂರಿನ ಕಡಲೆ ಕಾಯಿ ಪರಿಷೆಯಾ? ಬಾಂಗ್ಲಾ ಬ್ಯಾಂಗಲ್ ಪರಿಷೆಯಾ?” ಶೀರ್ಷಿಕೆಯಡಿ ಸವಿಸ್ತಾರವಾಗಿ ಸ್ಥಿರಚಿತ್ರ ಹಾಗೂ ವಿಡಿಯೋ ಸುದ್ದಿ ಪ್ರಕಟಿಸಿತ್ತು.

ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗೆ ಹೆಚ್ಚಿನ ಆದ್ಯತೆ ನೀಡದೆ, ಇತರ ಬಳೆ, ಬಲೂನು, ಕಿವಿಯೋಲೆ, ಗೃಹೋಪಯೋಗಿ ವಸ್ತುಗಳು, ಬಟ್ಟೆ, ತಿಂಡಿ ಅಂಗಡಿ ಹಾಗೂ ಮತ್ತಿತರ ವಸ್ತುಗಳ ಬೀದಿ ವ್ಯಾಪಾರಿಗಳೇ ರಸ್ತೆಯನ್ನು ಆಕ್ರಮಿಸಿಕೊಂಡಿದ್ದರಿಂದ ಸಾಂಪ್ರದಾಯಿಕ ಜಾತ್ರೆಯಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗೆ ಜಾಗದ ಕೊರತೆ ಕಂಡುಬಂದಿತ್ತು.
ಬಹುತೇಕವಾಗಿ ಕಡಲೆಕಾಯಿ ವ್ಯಾಪಾರಿಗಳಿಗಿಂತ ಬಾಂಗ್ಲಾ ನುಸುಳುಕೋರರು ಬೀದಿ ವ್ಯಾಪಾರಿಗಳ ಸೋಗಿನಲ್ಲಿ ಬಳೆ, ಕಿವಿಯೋಲೆ, ಫೊಟೊ ಫ್ರೇಮ್, ಬಲೂನು ಮಾರಾಟ ಮಾಡುವವರಿಂದ ತುಂಬಿ ಹೋಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು ಎಂದು ಬೆಂಗಳೂರು ವೈರ್ ನಲ್ಲಿ ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿಯ ಬಳಿಕ ಎಚ್ಚೆತ್ತುಕೊಂಡ ಮುಜರಾಯಿ ಇಲಾಖೆ ಆಯುಕ್ತರು ಹಾಗೂ ಶಾಸಕ ರವಿಸುಬ್ರಮಣ್ಯನವರು ದೇವಸ್ಥಾನದ ಮುಂಭಾಗ ರಸ್ತೆಯಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕಡಲೆಕಾಯಿ ವ್ಯಾಪಾರಿಗಳು ಕಾಲಿ ಮಾಡಿದ ಸ್ಥಳದಲ್ಲಿ ಕಡಲೆಕಾಯಿ ಹಾಕಿಕೊಂಡು ಬೀದಿ ವ್ಯಾಪಾರ ಪ್ರಾರಂಭಿಸಿದ್ದಾರೆ.

“ಶೇಕಡ 50ರಷ್ಟು ಬಳೆ ಮತ್ತು ಇನ್ನಿತರೆ ವ್ಯಾಪರಸ್ಥರನ್ನು ಸ್ಥಳದಿಂದ ಖುಲ್ಲಾ ಪಡಿಸಿದ್ದು, ಆ ಜಾಗದಲ್ಲಿ ಕಡಲೆಕಾಯಿ ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದು. ಎಲ್ಲಾ ಕಡೆ ದೇವಸ್ಥಾನದ ಮುಂಭಾಗದಲ್ಲಿ ಕಡಲೆ ಕಾಯಿ ವ್ಯಾಪಾರ ಮಾಡಲು ಪ್ರಚಾರಪಡಿಸಿದ್ದೇವೆ. ಈ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮತ್ತು ಪೋಲಿಸ್ ಇಲಾಖೆಗೆ ಸೂಚನೆ ನೀಡಲಾಗಿರುತ್ತದೆ” ಎಂದು ಬಸವನಗುಡಿ ದೊಡ್ಡ ಗಣೇಶ ದೇವಸ್ಥಾನದ ದತ್ತಿ ಅಧಿಕಾರಿ ಅರವಿಂದ ಬಾಬು ಹೇಳಿದ್ದಾರೆ.
ಈ ಬಾರಿಯ ಕಡಲೆಕಾಯಿ ಪರಿಷೆಯಲ್ಲಿ ಸುಮಾರು 4-5 ಸಾವಿರ ಅಂಗಡಿಗಳಿಗೆ ಶುಲ್ಕ ರಹಿತವಾಗಿ ಅವಕಾಶ ಮಾಡಿಕೊಡಲಾಗಿದೆ. ಮುಜರಾಯಿ ಇಲಾಖೆಯಾಗಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶ್ಚಿಮ ನಗರ ಪಾಲಿಕೆಯಾಗಲಿ ಯಾವ್ಯಾವ ಭಾಗದಲ್ಲಿ ಯಾವ್ಯಾವ ರೀತಿಯ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬೇಕೆಂದು ಸ್ಥಳ ನಿಗದಿ ಮಾಡದೆ, ರಸ್ತೆ ಮಧ್ಯೆ ಕೇವಲ ಸಾಲುದ್ದ ಬ್ಯಾರಿಕೇಡ್ ಗಳನ್ನು ಹಾಕಿ ಕೈತೊಳದುಕೊಂಡಿದೆ.
ಹೀಗಾಗಿ ದೇಶದ ಭದ್ರತೆಗೆ ಅಪಾಯಕಾರಿಯಾದ ಬಾಂಗ್ಲಾ ಅಕ್ರಮ ನುಸುಳುಕೋರರು ವ್ಯಾಪಾರಿಗಳ ಸೋಗಿನಲ್ಲಿ ಪರಿಷೆಯಲ್ಲಿ ಬೀದಿ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯ ನಾಗರೀಕರು ಅಭಿಪ್ರಾಯಪಟ್ಟಿದ್ದಾರೆ.























