ಬೆಂಗಳೂರು, ನ.17 www.bengaluruwire.com : ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದ್ದು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಸೋಮವಾರ ಅಭಿಪ್ರಾಯಪಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆಸ್ ಕ್ಲಬ್ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಏಕತೆ ಸೃಷ್ಟಿಸುವಲ್ಲಿ ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜಕೀಯ ಹಾಗೂ ಮಾಧ್ಯಮಗಳು ಸಮಾಜದ ಕಣ್ಣುಗಳಾಗಿದ್ದು, ಇವೆರಡು ಸತ್ಯವನ್ನು ಗುರುತಿಸುವುದರಲ್ಲಿ ವಿಫಲವಾದರೆ ಸಮಾಜವು ಅಧೋಗತಿಗೆ ಇಳಿಯುತ್ತದೆ ಎಂದು ಸಭಾಧ್ಯಕ್ಷರು ಎಚ್ಚರಿಸಿದರು.
ಜನಪ್ರತಿನಿಧಿಗಳು ಟೀಕೆಗಳನ್ನು ಆರೋಗ್ಯಕರವಾಗಿ ಸ್ವೀಕರಿಸಿ:
ಪತ್ರಕರ್ತರು ಸುದ್ದಿ ಮಾಡುವಾಗ ಎದುರಾಗುವ ಬೆದರಿಕೆಗಳನ್ನು ನಿಭಾಯಿಸಿ ಮುನ್ನುಗ್ಗುತ್ತಿದ್ದಾರೆ. ರಾಜಕಾರಣಿಗಳು ಮಾಧ್ಯಮಗಳ ಟೀಕೆ-ಟಿಪ್ಪಣಿಗಳನ್ನು ಆರೋಗ್ಯಕರವಾಗಿ ತೆಗೆದುಕೊಳ್ಳಬೇಕು. ಸತ್ಯವು ಯಾವತ್ತಿದ್ದರೂ ದಾಖಲೆಯಾಗಿರುತ್ತದೆ, ಆದರೆ ಸುಳ್ಳು ಸೃಷ್ಟಿಮಾಡಿದ್ದಾಗಿರುತ್ತದೆ. ಸಾಮಾಜಿಕ ಸಾಮರಸ್ಯ ಕಾಯ್ದುಕೊಂಡು ಮಾಧ್ಯಮಗಳು ಕಾರ್ಯನಿರ್ವಹಿಸಬೇಕು. ಆ ಮೂಲಕ ಉತ್ತಮ ಸಮಾಜ ಕಟ್ಟಲು ಮಾಧ್ಯಮಗಳು ಕಟಿಬದ್ಧವಾಗಿವೆ ಎಂದರು.

ಪತ್ರಿಕೋದ್ಯಮ ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಪಾಸ್ ವ್ಯವಸ್ಥೆ:
ಸಾಮಾಜಿಕ ಜಾಲತಾಣವನ್ನು ಜನಾಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಸೋಶಿಯಲ್ ಮೀಡಿಯಾಗಳನ್ನು ಮುಖ್ಯವಾಹಿನಿಯ ಜೊತೆಗೆ ಸೇರಿಸಿಕೊಂಡು ಹೋಗಬೇಕಿದೆ ಎಂದು ಖಾದರ್ ತಿಳಿಸಿದರು. ಇದೇ ವೇಳೆ, ಪತ್ರಿಕೋದ್ಯಮ ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಅಧಿವೇಶನದಲ್ಲಿ ಪಾಲ್ಗೊಂಡು ವೀಕ್ಷಿಸಲು ಒಂದು ದಿನದ ಪಾಸ್, ಮತ್ತು ಉತ್ತಮ ಜನಪ್ರತಿನಿಧಿಗಳನ್ನು ತಯಾರು ಮಾಡಲು ಒಂದು ವರ್ಷದ ಕೋರ್ಸನ್ನು ವಿಧಾನಸಭೆಯಿಂದ ಪ್ರಾರಂಭಿಸುವ ಚಿಂತನೆಯಿದೆ ಎಂದು ಪ್ರಸ್ತಾಪಿಸಿದರು. ಈ ಒಂದು ವರ್ಷದ ಕೋರ್ಸಿನಲ್ಲಿ 6 ತಿಂಗಳ ಪಠ್ಯ ಮತ್ತು 6 ತಿಂಗಳ ಪ್ರಾಕ್ಟಿಕಲ್ ಶಿಕ್ಷಣ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಚಾರಸಂಕಿರಣ ಆಯೋಜನೆ:
ಇದೇ ಸಂದರ್ಭದಲ್ಲಿ “ಹೆಚ್ಚುತ್ತಿರುವ ಸುಳ್ಳು ಸುದ್ದಿಗಳ ನಡುವೆ ಮಾಧ್ಯಮಗಳ ವಿಶ್ವಾಸಾರ್ಹತೆಯ ರಕ್ಷಣೆ” ಎಂಬ ವಿಷಯ ಕುರಿತು ವಿಚಾರಸಂಕಿರಣವನ್ನು ಆಯೋಜಿಸಲಾಗಿತ್ತು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರು ಆಶಯ ಭಾಷಣ ಮಾಡಿದರು. ಎನ್.ಡಿ.ಟಿವಿಯ ನಿವೃತ್ತ ಸಂಪಾದಕರು ನೂಪರ್ ಬಸು, ಹಿರಿಯ ಪತ್ರಕರ್ತರಾದ ಡಾ.ಆರ್.ಪೂರ್ಣಿಮಾ, ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ನಿರ್ದೇಶಕರಾದ ಮಂಜುನಾಥ್, ಅಕಾಡೆಮಿಯ ಕಾರ್ಯದರ್ಶಿ ಸಹನಾ.ಎಂ, ಸದಸ್ಯರಾದ ಕೆಂಚೇಗೌಡ, ವೆಂಕಟೇಶ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.























