ಬೆಂಗಳೂರು, ನ.16 www.bengaluruwire.com : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ನವೆಂಬರ್ 18 ಮತ್ತು 19 ರಂದು ನಗರದಲ್ಲಿ ಬೃಹತ್ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.
ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಶ್ರಮಿಸಿದ ಐವರು ಸಾಧಕರಿಗೆ ರಾಜ್ಯ ಮಟ್ಟದ ‘ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ’ ನೀಡಲಾಗುವುದು ಎಂದು ಮಂಡಳಿ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ದಿನ, ನ. 18 ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಜಾತ್ಯತೀತ ಆರ್ಥಿಕತೆ ಮತ್ತು ಸುಸ್ಥಿರತೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ತ್ಯಾಜ್ಯ ನೀರು, ಘನತ್ಯಾಜ್ಯ, ಇ-ತ್ಯಾಜ್ಯ ನಿರ್ವಹಣೆ ಹಾಗೂ ವಿಸ್ತೃತ ಉತ್ಪಾದಕ ಹೊಣೆಗಾರಿಕೆ ಕುರಿತು ತಜ್ಞರು ಚರ್ಚಿಸಲಿದ್ದಾರೆ. ಅರಣ್ಯ, ಜೀವಪರಿಸ್ಥಿತಿ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಮತ್ತು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಉಪಸ್ಥಿತರಿರುವರು.
ಎರಡನೇ ದಿನ, ನ. 19 ರಂದು ಅರಮನೆ ಮೈದಾನದಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಡಿ.ಕೆ. ಶಿವಕುಮಾರ್ ಉಪಸ್ಥಿತರಿರಲಿದ್ದಾರೆ. ಈಶ್ವರ್ ಖಂಡ್ರೆ ಅಧ್ಯಕ್ಷತೆ ವಹಿಸಲಿದ್ದಾರೆ.

ಸುವರ್ಣ ಮಹೋತ್ಸವದ ಭಾಗವಾಗಿ ರಾಜ್ಯಾದ್ಯಂತ ವಿಧಾನಸಭಾ ಕ್ಷೇತ್ರಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಯುವಕರನ್ನು ತೊಡಗಿಸಿಕೊಳ್ಳಲು ಪರಿಸರ ಜಾಗೃತಿ ಕುರಿತು ರಿಲ್ಸ್ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ₹50,000 ಬಹುಮಾನ ಘೋಷಿಸಲಾಗಿದೆ. ಪರಿಸರ ಜಾಗೃತಿ ಮೂಡಿಸುವುದು ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕೊಡುಗೆಯನ್ನು ಸ್ಮರಿಸುವುದು ಇದರ ಪ್ರಮುಖ ಧ್ಯೇಯವಾಗಿದೆ.






















