ತೀತ್ವಾಲ್ (ಕಾಶ್ಮೀರ ಗಡಿ ನಿಯಂತ್ರಣ ರೇಖೆ), ನ.13 www.bengaluruwire.com : ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ನಿಯಂತ್ರಣ ರೇಖೆಗೆ (LoC) ಹೊಂದಿಕೊಂಡಿರುವ ಕಾಶ್ಮೀರದ ಕುಪ್ವಾರ ಜಿಲ್ಲೆಯ ತೀತ್ವಾಲ್ ಗ್ರಾಮದಲ್ಲಿ, ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾದ ಅತ್ಯಂತ ಹೃದಯಸ್ಪರ್ಶಿ ಘಟನೆಯೊಂದು ವರದಿಯಾಗಿದೆ. ಐತಿಹಾಸಿಕ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳ ಅನುಕೂಲಕ್ಕಾಗಿ, ಸ್ಥಳೀಯ ಮುಸ್ಲಿಂ ಕುಟುಂಬವೊಂದು ತಮ್ಮ ಕುಟುಂಬಕ್ಕೆ ಸೇರಿದ ಒಂದು ಗುಂಟೆ ಭೂಮಿಯನ್ನು ಉಚಿತವಾಗಿ ದಾನ ಮಾಡಿದೆ.
ಗ್ರಾಮದ ಹಿರಿಯ ಮತ್ತು ಮುಸ್ಲಿಂ ಕುಟುಂಬದ ಮುಖ್ಯಸ್ಥರಾದ ಗಾಯ್ಸುದ್ದಿನ್ ಅವರು ಈ ಉದಾರ ಮನಸ್ಸಿನಿಂದ ದಾನ ಮಾಡಿದ್ದಾರೆ. ತೀತ್ವಾಲ್‌ನಲ್ಲಿ ಪುನಃ ನಿರ್ಮಾಣಗೊಂಡಿರುವ ಶಾರದಾ ದೇವಸ್ಥಾನಕ್ಕೆ ಬರುವ ಹಿಂದೂ ಭಕ್ತರಿಗೆ ಶೌಚಾಲಯದ ಕೊರತೆಯನ್ನು ಗಾಯ್ಸುದ್ದಿನ್ ಅವರು ಗಮನಿಸಿದ್ದರು. ಈ ಸಮಸ್ಯೆಯನ್ನು ನಿವಾರಿಸಲು, ದೇವಾಲಯಕ್ಕೆ ಹೊಂದಿಕೊಂಡಿರುವ ತಮ್ಮ ಕುಟುಂಬದ ಒಡೆತನದ ಭೂಮಿಯ ಒಂದು ಗುಂಟೆ ಜಮೀನನ್ನು ಶೌಚಾಲಯ ನಿರ್ಮಾಣಕ್ಕಾಗಿ ಉಚಿತವಾಗಿ ವರ್ಗಾಯಿಸಲು ಅವರು ನಿರ್ಧರಿಸಿದರು.
ದೆಹಲಿಯಲ್ಲಿ ದಾಖಲೆ ಹಸ್ತಾಂತರ:
ಈ ಜಮೀನಿನ ಹಕ್ಕು ಪತ್ರ ದಾಖಲೆಗಳನ್ನು ಗಾಯ್ಸುದ್ದಿನ್ ಕುಟುಂಬವು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಿತು. ಶಾರದಾ ಪ್ರವಾಸಿ ಮಂಡಲದ ಅಧ್ಯಕ್ಷೆ ನಸ್ರೀನ್ ಖಾನ್ ಮತ್ತು ದೇವಾಲಯ ನಿರ್ವಹಣೆ ಸಮಿತಿ ಮುಖ್ಯಸ್ಥ ಅಜಾಜ್ ಖಾನ್ ಅವರ ಸಮ್ಮುಖದಲ್ಲಿ ಈ ಮಹತ್ವದ ದಾಖಲೆಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪಂಡಿತ ಅವರಿಗೆ ನೀಡಲಾಯಿತು.

ಗಡಿ ಪ್ರದೇಶದಲ್ಲಿ ಸೌಹಾರ್ದ ಮತ್ತು ಮಾನವೀಯತೆಯ ಪ್ರತೀಕವೆಂಬಂತೆ ಧಾರ್ಮಿಕ ಸಾಮರಸ್ಯಕ್ಕೆ ಉತ್ತಮ ಉದಾಹರಣೆಯಾಗಿದೆ. ಕಾಶ್ಮೀರದ ಗಡಿಯಲ್ಲಿ ನೆಲೆಸಿರುವ ಸಮುದಾಯಗಳು, ಧರ್ಮ ಭೇದವಿಲ್ಲದೆ ಪರಸ್ಪರ ಸಹಕಾರ ಮತ್ತು ಪ್ರೀತಿಯಿಂದ ಬದುಕುತ್ತಿವೆ ಎಂಬುದನ್ನು ಈ ಘಟನೆ ಜಗತ್ತಿಗೆ ಸಾರಿದೆ. ದೇವಸ್ಥಾನದ ಆಡಳಿತ ಮಂಡಳಿಯು ಗಾಯ್ಸುದ್ದಿನ್ ಕುಟುಂಬದ ಈ ಉದಾರ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದೆ.






















