ನವದೆಹಲಿ, ನ.13 www.bengaluruwire.com : ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಹಾಗೂ ರಸಗೊಬ್ಬರ ಇಲಾಖೆ (DoF) ಜಂಟಿಯಾಗಿ ಮುಂಗಾರು ಮತ್ತು ಪ್ರಸ್ತುತ ನಡೆಯುತ್ತಿರುವ ಹಿಂಗಾರು ಹಂಗಾಮು (ಏಪ್ರಿಲ್‌ನಿಂದ ನವೆಂಬರ್ 2025-26) ಉದ್ದಕ್ಕೂ ರೈತರ ಹಿತಾಸಕ್ತಿ ಕಾಪಾಡಲು ಮತ್ತು ದೇಶದ ರಸಗೊಬ್ಬರ ಪೂರೈಕೆ ಸರಪಳಿಯನ್ನು ಬಲಡಿಸಲು ವ್ಯಾಪಕ ಕಾರ್ಯಾಚರಣೆಯನ್ನು ನಡೆಸಿದೆ.
ಕೇಂದ್ರ ಸರ್ಕಾರದ ಈ ಎರಡು ಇಲಾಖೆಗಳು ರಾಜ್ಯ ಸರ್ಕಾರಗಳೊಂದಿಗೆ ನಿಕಟ ಸಮನ್ವಯದ ಮೂಲಕ ಕಾರ್ಯನಿರ್ವಹಿಸಿ, ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ, ಸಂಗ್ರಹಣೆ ಮತ್ತು ಬೇರೆಡೆ ಅಕ್ರಮವಾಗಿ ಮಾರಾಟ ಮಾಡುವುದನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ದೇಶಾದ್ಯಂತ ದಾಳಿ ಮತ್ತು ಪರಿಶೀಲನೆಗಳನ್ನು ತೀವ್ರಗೊಳಿಸಿವೆ.
ಕಠಿಣ ಕ್ರಮಗಳ ವಿವರ ಹೀಗಿದೆ:
ಈ ವಿಶೇಷ ಕಾರ್ಯಾಚರಣೆಯಡಿಯಲ್ಲಿ, ದೇಶಾದ್ಯಂತ ಒಟ್ಟು 3,17,054 ತಪಾಸಣೆಗಳು ಮತ್ತು ದಾಳಿಗಳನ್ನು ನಡೆಸಲಾಗಿದೆ. ಇದರ ಪರಿಣಾಮವಾಗಿ, ಕಾಳಸಂತೆಗೆ ಸಂಬಂಧಿಸಿದ 5,119 ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದ್ದು, 3,645 ವಿತರಕರ ಪರವಾನಗಿಗಳನ್ನು ರದ್ದುಪಡಿಸಲಾಗಿದೆ ಅಥವಾ ಅಮಾನತು ಮಾಡಿದೆ. ಅಲ್ಲದೆ, ದೇಶಾದ್ಯಂತ ಈ ಸಂಬಂಧ ಒಟ್ಟು 418 ಎಫ್‌ಐಆರ್‌ಗಳನ್ನು (FIR) ಸಹ ದಾಖಲಿಸಲಾಗಿದೆ.

ಅಕ್ರಮ ಸಂಗ್ರಹಣೆ (Hoarding) ತಡೆಯಲು 667 ಶೋಕಾಸ್ ನೋಟಿಸ್, 202 ಪರವಾನಗಿ ರದ್ದು ಮತ್ತು 37 ಎಫ್‌ಐಆರ್ ದಾಖಲಿಸಲಾಗಿದೆ. ಬೇರೆಡೆಗೆ ತಿರುಗಿಸುವ ಪ್ರಕರಣಗಳಲ್ಲಿ 2,991 ಶೋಕಾಸ್ ನೋಟಿಸ್, 451 ಪರವಾನಗಿ ರದ್ದು ಮತ್ತು 92 ಎಫ್‌ಐಆರ್ ದಾಖಲಾಗಿವೆ. ಈ ಎಲ್ಲ ಜಾರಿ ಕ್ರಮಗಳನ್ನು ಅಗತ್ಯ ಸರಕುಗಳ ಕಾಯ್ದೆ (Essential Commodities Act) ಮತ್ತು ರಸಗೊಬ್ಬರ ನಿಯಂತ್ರಣ ಆದೇಶದ (Fertilizer Control Order) ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ.
ಪ್ರಮುಖ ರಾಜ್ಯಗಳ ಕಾರ್ಯಾಚರಣೆ ಹಾಗೂ ಕ್ರಮಗಳು:
* ಉತ್ತರ ಪ್ರದೇಶವು 28,273 ತಪಾಸಣೆಗಳೊಂದಿಗೆ ಮುಂಚೂಣಿಯಲ್ಲಿದ್ದು, 2,730 ಪರವಾನಗಿಗಳನ್ನು ರದ್ದುಗೊಳಿಸಿದೆ ಮತ್ತು 157 ಎಫ್‌ಐಆರ್‌ಗಳನ್ನು ದಾಖಲಿಸಿದೆ.
* ಮಹಾರಾಷ್ಟ್ರವು 42,566 ತಪಾಸಣೆ ನಡೆಸಿ, ಬೇರೆಡೆಗೆ ಮಾರಾಟ ಮಾಡುವ, ನಿಯಮ ಉಲ್ಲಂಘನೆಗಾಗಿ 1,000ಕ್ಕೂ ಹೆಚ್ಚು ಪರವಾನಗಿಗಳನ್ನು ರದ್ದುಗೊಳಿಸಿದೆ.
* ರಾಜಸ್ಥಾನ, ಬಿಹಾರ, ಹರಿಯಾಣ, ಪಂಜಾಬ್, ಒಡಿಶಾ, ಛತ್ತೀಸ್‌ಗಢ ಮತ್ತು ಗುಜರಾತ್ ಸಹ ಬೃಹತ್ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಿ, ಮಾರುಕಟ್ಟೆ ಶಿಸ್ತನ್ನು ಕಾಪಾಡಲು ನೆರವಾಗಿವೆ.
ಇದಲ್ಲದೆ, ಕಳಪೆ ಗುಣಮಟ್ಟದ ರಸಗೊಬ್ಬರಗಳ ವಿರುದ್ಧ 3,544 ಶೋಕಾಸ್ ನೋಟಿಸ್ ನೀಡಿ, 1,316 ಪರವಾನಗಿಗಳನ್ನು ರದ್ದುಪಡಿಸಿ, 60 ಎಫ್‌ಐಆರ್‌ಗಳನ್ನು ದಾಖಲಿಸುವ ಮೂಲಕ ಗುಣಮಟ್ಟ ನಿಯಂತ್ರಣವನ್ನು ಸಹ ಖಾತರಿಪಡಿಸಲಾಗಿದೆ. ಡಿಜಿಟಲ್ ಡ್ಯಾಶ್‌ಬೋರ್ಡ್‌ಗಳ ಬಳಕೆಯಿಂದಾಗಿ ನೈಜ-ಸಮಯದ ಮೇಲ್ವಿಚಾರಣೆ ಸಾಧ್ಯವಾಗಿದೆ. ಈ ಕ್ರಮಗಳಿಂದಾಗಿ ಕೃಷಿ ಹಂಗಾಮಿನ ಸಮಯದಲ್ಲಿ ಕೃತಕ ಅಭಾವ ಮತ್ತು ಬೆಲೆ ಏರಿಕೆ ತಪ್ಪಿದೆ.
ರಸಗೊಬ್ಬರ ಇಲಾಖೆಯು ರಾಜ್ಯ ಮತ್ತು ಜಿಲ್ಲಾಡಳಿತಗಳ ಕಾರ್ಯವನ್ನು ಶ್ಲಾಘಿಸಿದ್ದು, ರೈತರು ಯಾವುದೇ ಅಕ್ರಮಗಳನ್ನು ವರದಿ ಮಾಡುವಂತೆ ಮನವಿ ಮಾಡಿದೆ.






















