ಬೆಂಗಳೂರು, ನ.13 www.bengaluruwire.com : ಬನ್ನೇರುಘಟ್ಟ ಜೈವಿಕ ಉದ್ಯಾನವನದ (Bannerghatta Biological Park) ಚಿರತೆ ಸಫಾರಿಯಲ್ಲಿ (Leopard Safari) ಗುರುವಾರ ಮಧ್ಯಾಹ್ನ (ನವೆಂಬರ್ 13, 2025) ಮತ್ತೊಂದು ದುರದೃಷ್ಟಕರ ಘಟನೆ ನಡೆದಿದೆ. ನಾನ್-ಎಸಿ ಸಫಾರಿ ಬಸ್‌ನಲ್ಲಿದ್ದ 56 ವರ್ಷದ ವಹಿತಾ ಬಾನು (Vahitha Banu) ಅವರ ಕೈಗೆ ಚಿರತೆಯೊಂದು ಬಸ್‌ಗೆ ಹತ್ತಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ಉಗುರಿನಿಂದ ಗಾಯವಾಗಿದೆ.
ಇಂದು ಮಧ್ಯಾಹ್ನ ಸುಮಾರು 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಅವರು ಆರೋಗ್ಯವಾಗಿದ್ದಾರೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ನಾನ್-ಎಸಿ ಸಫಾರಿ ಸ್ಥಗಿತ :
ಘಟನೆಯ ನಂತರ, ಉದ್ಯಾನವನದ ಅಧಿಕಾರಿಗಳು ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದ್ದಾರೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ನಾನ್-ಎಸಿ ಬಸ್ ಸಫಾರಿಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ, ಸಫಾರಿ ಬಸ್‌ಗಳ ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚಾಲಕರಿಗೆ ಈಗಾಗಲೇ ಹಲವು ಬಾರಿ ಎಚ್ಚರಿಕೆ :
ಹಿಂದಿನ ಚಿರತೆ ದಾಳಿಯ ಘಟನೆಗಳ ಹಿನ್ನೆಲೆಯಲ್ಲಿ, ಚಿರತೆ ಸಫಾರಿಯೊಳಗೆ ಮುನ್ನೆಚ್ಚರಿಕೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಸಫಾರಿ ಚಾಲಕರಿಗೆ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿ, ಸೂಕ್ತ ಸೂಚನೆಗಳನ್ನು ನೀಡಲಾಗಿತ್ತು ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಈ ಘಟನೆಯಿಂದ ಸಂದರ್ಶಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಲಾಗಿದೆ.






















