ಬೆಂಗಳೂರು, ನ.12 www.bengaluruwire.com : ನಗರದ ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯ ಕುರುಬರ ಸಂಘದ ಹಾಸ್ಟೆಲ್ ಕಟ್ಟಡ ಕಾಮಗಾರಿಯು ಮುಂದಿನ 18 ತಿಂಗಳೊಳಗೆ ಸಂಪೂರ್ಣಗೊಂಡು ಉದ್ಘಾಟನೆಯಾಗಲಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರು ತಿಳಿಸಿದ್ದಾರೆ.
ಬುಧವಾರ ಕಟ್ಟಡ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹೊಸ ಕಟ್ಟಡವು ಸಮಾಜದ ನೂರಾರು ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ, ಸಮುದಾಯದ ಮುಖಂಡರು ಮತ್ತು ಪದಾಧಿಕಾರಿಗಳು ಈ ನೂತನ ಕಟ್ಟಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡುವಂತೆ ಅವರು ಇದೇ ವೇಳೆ ಮನವಿ ಮಾಡಿದರು.
ಸಿದ್ದರಾಮಯ್ಯ-ಶಿವಕುಮಾರ್ ‘ಅಣ್ಣ-ತಮ್ಮಂದಿರಂತೆ’ :
ರಾಜ್ಯ ರಾಜಕೀಯದ ಕುರಿತು ಮಾತನಾಡಿದ ಸಚಿವ ಸುರೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ಅಣ್ಣ-ತಮ್ಮಂದಿರಂತೆ ಅನ್ಯೋನ್ಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಶ್ಲಾಘಿಸಿದ ಅವರು, “ಸಿದ್ದರಾಮಯ್ಯನವರು ಕೇವಲ ಕುರುಬ ಸಮುದಾಯಕ್ಕಷ್ಟೇ ಅಲ್ಲ, ರಾಜ್ಯದ ಏಳೂವರೆ ಕೋಟಿ ಜನರ ಧ್ವನಿಯಾಗಿ, ಎಲ್ಲಾ ಸಮುದಾಯಗಳ ಪರವಾಗಿ ಜಾತ್ಯತೀತ ಮನೋಭಾವನೆಯಿಂದ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ,” ಎಂದು ಹೇಳಿದರು.
ಸಿದ್ದರಾಮಯ್ಯ ಪಾತ್ರಕ್ಕೆ ಶ್ಲಾಘನೆ :
ಕುರುಬ ಸಮಾಜದ ಬಲದ ಕುರಿತು ಮಾತನಾಡಿದ ಸಚಿವರು, ಸಮಾಜದ ಬಗ್ಗೆ ಮತ್ತು ನಾಯಕರಾದ ಸಿದ್ದರಾಮಯ್ಯ ಅವರ ಬಗ್ಗೆ ಕೆಲವರು ನೀಡುತ್ತಿರುವ ಹೇಳಿಕೆಗಳಿಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಸಮಾಜದ ಕಾಗಿನೆಲೆ ಪೀಠವನ್ನು ಸ್ಥಾಪಿಸುವಲ್ಲಿ ಸಿದ್ದರಾಮಯ್ಯನವರ ಪಾತ್ರ ಪ್ರಮುಖವಾಗಿದ್ದು, ಅವರು ಪೀಠಕ್ಕೆ ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಅಲ್ಲದೆ, ಇತರ ಸಮುದಾಯಗಳಿಗೂ ಯಥೇಚ್ಛವಾಗಿ ಅನುದಾನಗಳನ್ನು ನೀಡುವ ಮೂಲಕ ಅವರು ಎಲ್ಲಾ ಸಮುದಾಯದ ನಾಯಕರಾಗಿದ್ದಾರೆ ಎಂದು ಬೈರತಿ ಸುರೇಶ್ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗುವುದು ಸುಲಭದ ಮಾತಲ್ಲ. ಸಿದ್ದರಾಮಯ್ಯನವರು ಪ್ರಜಾಪ್ರಭುತಾತ್ಮಕ ರೀತಿಯಲ್ಲಿ ನಾಯಕರಾಗಿ, ರಾಷ್ಟ್ರೀಯ ನಾಯಕರ ಪ್ರೀತಿಗೆ ಪಾತ್ರರಾಗಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿ ಸಮರ್ಥವಾಗಿ, ಪ್ರಾಮಾಣಿಕವಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಅವರು ನುಡಿದರು.
ದೇವಸ್ಥಾನದ ಬದಲಿಗೆ ಹಾಸ್ಟೆಲ್ ಕಟ್ಟಿ :
ಈ ವೇಳೆ ಸಮಾಜಕ್ಕೆ ಪ್ರಮುಖ ಸಂದೇಶ ನೀಡಿದ ಸಚಿವ ಸುರೇಶ್ ಅವರು, ಬೆಂಗಳೂರಿನ ಕುರುಬರ ಸಂಘದ ಕಟ್ಟಡವನ್ನು ಸರ್ಕಾರದಿಂದಾಗಲೀ ಅಥವಾ ಸಿಎಸ್‌ಆರ್‌ನಿಂದಾಗಲೀ ದೇಣಿಗೆ ಪಡೆಯದೇ ಸಮುದಾಯದ ಮುಖಂಡರೆಲ್ಲಾ ಸೇರಿ ನಿರ್ಮಾಣ ಮಾಡುತ್ತಿದ್ದೇವೆ ಎಂದರು.
ಈ ಮಾದರಿಯನ್ನು ಅನುಸರಿಸಿ, ಕುರುಬ ಸಮಾಜದವರು ತಮ್ಮ ತಮ್ಮ ನಗರ ಮತ್ತು ಪಟ್ಟಣಗಳಲ್ಲಿ ದೇವಸ್ಥಾನಗಳನ್ನು ಕಟ್ಟಿಸುವ ಬದಲು, ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಹಾಸ್ಟೆಲ್, ಶಾಲಾ-ಕಾಲೇಜು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಬೇಕೆಂದು ಅವರು ಕರೆ ನೀಡಿದರು. ಇದರಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.






















