ಬೆಂಗಳೂರು, ನ.12 www.bengaluruwire.com : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಪ್ರತಿಷ್ಠಿತ ಫ್ಲೈ ಬಸ್ (Fly Bus) ಸೇವೆಯನ್ನು ಮತ್ತಷ್ಟು ವಿಸ್ತರಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ರಿಂದ ದಾವಣಗೆರೆಗೆ ಹೊಸದಾಗಿ ನೇರ ಫ್ಲೈಬಸ್ (ವೋಲ್ವೋ ಮಲ್ಟಿ ಆಕ್ಸೆಲ್) ಸೇವೆಯನ್ನು ಇಂದು (ನವೆಂಬರ್ 12) ವಿದ್ಯುಕ್ತವಾಗಿ ಪ್ರಾರಂಭಿಸಿದೆ.
ಇದರ ಜೊತೆಗೆ, ಫ್ಲೈ ಬಸ್ ಪ್ರಯಾಣಿಕರಿಗೆ ಕರ್ನಾಟಕ ಹಾಲು ಮಹಾಮಂಡಳ (KMF) ಸಹಯೋಗದಲ್ಲಿ ‘ನಂದಿನಿ’ ಉತ್ಪನ್ನಗಳ ಸ್ನ್ಯಾಕ್ಸ್ ಕಿಟ್‌ಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೂ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಹೊಸ ಮಾರ್ಗ: ಬೆಂಗಳೂರು ವಿಮಾನ ನಿಲ್ದಾಣ-ದಾವಣಗೆರೆ :

ಸಾರಿಗೆ ಸಚಿವರು ಮಾತನಾಡಿ, ಸಾರಿಗೆ ಸಚಿವರಾಗಿ ತಮ್ಮ ಮೊದಲ ಅವಧಿಯಲ್ಲೇ 2013ರ ಆಗಸ್ಟ್‌ನಲ್ಲಿ ವಿಮಾನ ನಿಲ್ದಾಣದಿಂದ ಮೈಸೂರಿಗೆ ಮೊದಲ ಬಾರಿಗೆ ಫ್ಲೈ ಬಸ್ ವ್ಯವಸ್ಥೆ ಪ್ರಾರಂಭಿಸಲಾಗಿತ್ತು. ನಂತರ ಈ ಸೇವೆಯನ್ನು ಮಡಿಕೇರಿ ಮತ್ತು ಕುಂದಾಪುರಕ್ಕೂ ವಿಸ್ತರಿಸಲಾಯಿತು. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಆ ನಿಟ್ಟಿನಲ್ಲಿ ಇಂದು ಬೆಂಗಳೂರು-ದಾವಣಗೆರೆ ನಡುವೆ ನೇರ ಫ್ಲೈ ಬಸ್ ಸೇವೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಮೈಸೂರು ನಗರದ ಧ್ವನಿ ಸ್ಪಂದನ ಉಪಕ್ರಮಕ್ಕೆ ಭಾರತ ಸರ್ಕಾರದಿಂದ ಉತ್ಕೃಷ್ಟತಾ ಪ್ರಶಸ್ತಿ ಲಭಿಸಿರುವುದನ್ನು ಉಲ್ಲೇಖಿಸಿದ ಅವರು, ಕೆಎಸ್‌ಆರ್‌ಟಿಸಿ ಯಾವಾಗಲೂ ಹೊಸ ಸೇವೆ ಮತ್ತು ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಹೊಸ ಮಾರ್ಗದಲ್ಲಿ ಪ್ರತಿದಿನ ನಾಲ್ಕು ಟ್ರಿಪ್‌ಗಳು ಇರಲಿವೆ ಎಂದು ಅವರು ಹೇಳಿದರು.
ಫ್ಲೈ ಬಸ್ ಪ್ರಯಾಣಿಕರಿಗೆ ಇನ್ನು ಮುಂದೆ ಉಚಿತ ‘ಸ್ಯ್ನಾಕ್ಸ್ ಕಿಟ್’ :
ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಫ್ಲೈ ಬಸ್ ಪ್ರಯಾಣಿಕರಿಗೆ ಇನ್ನು ಮುಂದೆ ಉಚಿತ ಸ್ನ್ಯಾಕ್ಸ್ ಕಿಟ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಎಂಎಫ್‌ನಿಂದ ಸ್ನ್ಯಾಕ್ಸ್ ಬಾಕ್ಸ್‌ಗಳನ್ನು ಖರೀದಿಸಲಾಗಿದ್ದು, ನವೆಂಬರ್ 15, 2025 ರಿಂದ ಜಾರಿಗೆ ಬರುವಂತೆ ಎಲ್ಲಾ ಫ್ಲೈಬಸ್ ಪ್ರಯಾಣಿಕರಿಗೆ ಇದನ್ನು ವಿತರಿಸಲಾಗುತ್ತದೆ.
ಕಿಟ್‌ನಲ್ಲಿ ಏನೇನಿದೆ? :
* ಒಂದು ನೀರಿನ ಬಾಟಲ್
* ಫ್ಲೇವರ್ಡ್ ಹಾಲು (Flavoured Milk)
* ಕುಕೀಸ್ (ಸಿಹಿ ಮತ್ತು ಖಾರ)
* ಕೇಕ್
* ಕೋಡುಬಳೆ ಪ್ಯಾಕೆಟ್
ಈ ಸ್ನ್ಯಾಕ್ಸ್ ಕಿಟ್‌ಗಳನ್ನು ಬ್ರ್ಯಾಂಡ್ ಮಾಡಲಾಗಿದ್ದು, ಅದರ ಹಿಂಬದಿಯಲ್ಲಿ ನಿಗಮದ ಪ್ರತಿಷ್ಠಿತ ಸೇವೆಗಳು, ದಕ್ಷಿಣ ಭಾರತದಾದ್ಯಂತ ಕಾರ್ಯಾಚರಣೆಯ ಸ್ಥಳಗಳ ಮಾಹಿತಿ ಮತ್ತು ಟಿಕೆಟ್ ಬುಕ್ ಮಾಡಲು ಅನುಕೂಲವಾಗುವಂತೆ ಕ್ಯೂಆರ್ ಸ್ಕ್ಯಾನರ್ ಕೋಡ್ (QR Scanner Code) ಅನ್ನು ಮುದ್ರಿಸಲಾಗಿದೆ.
ಬೆಂಗಳೂರು-ದಾವಣಗೆರೆ ಫ್ಲೈ ಬಸ್ ವೇಳಾಪಟ್ಟಿ ಮತ್ತು ದರ

ಮಾರ್ಗ ವಿವರ: ಬೆಂಗಳೂರು ವಿಮಾನ ನಿಲ್ದಾಣ > ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮೂಲಕ ದೊಡ್ಡಬಳ್ಳಾಪುರ ಬೈಪಾಸ್ > ಡಾಬಸ್ ಪೇಟೆ > ತುಮಕೂರು ಬೈಪಾಸ್ > ಚಿತ್ರದುರ್ಗ ಬೈಪಾಸ್ ಮೂಲಕ ನೇರವಾಗಿ ದಾವಣಗೆರೆ.
ಪ್ರಯಾಣಿಕರ ಅನುಕೂಲಕ್ಕಾಗಿ ತುಮಕೂರು ಬೈಪಾಸ್ ಹಾಗೂ ಚಿತ್ರದುರ್ಗ ಬೈಪಾಸ್‌ನಲ್ಲಿ ಪಿಕಪ್ ಮತ್ತು ಡ್ರಾಪ್ ಪಾಯಿಂಟ್‌ಗಳನ್ನು ನಿಗದಿಪಡಿಸಲಾಗಿದೆ.
ದರ ವಿವರ (ಬೆಂಗಳೂರು ವಿಮಾನ ನಿಲ್ದಾಣದಿಂದ):
* ತುಮಕೂರು: ₹400
* ಚಿತ್ರದುರ್ಗ: ₹980
* ದಾವಣಗೆರೆ: ₹1250
ಪ್ರಸ್ತುತ ಫ್ಲೈ ಬಸ್ ಕಾರ್ಯಾಚರಣೆಯ ವಿವರ :
ಒಟ್ಟು ಮಾರ್ಗಗಳು : 13
ದಿನವಹಿ ಟ್ರಿಪ್‌ಗಳು : 44
ದಿನವಹಿ ಕಿಮೀ : ₹10,240
ಪ್ರತಿ ಕಿಮೀ ಆದಾಯ : ₹90
ದಿನವಹಿ ಸರಾಸರಿ ಪ್ರಯಾಣಿಕರ ಸಂಖ್ಯೆ : 1050
ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ, ನಿರ್ದೇಶಕರಾದ ಡಾ.ಕೆ ನಂದಿನಿ ದೇವಿ, ಇಬ್ರಾಹಿಂ ಮೈಗೂರ, ಕೆಐಎಎಲ್ ಮತ್ತು ಕೆಎಂಎಫ್‌ನ ಹಿರಿಯ ಅಧಿಕಾರಿಗಳು ಹಾಗೂ ನಿಗಮದ ಸಿಬ್ಬಂದಿ ಹಾಜರಿದ್ದರು.






















