ಬೆಂಗಳೂರು, ನ. 12 www.bengaluruwire.com : ಅಂತೂ ಇಂತೂ ಹಲವು ದಿನಗಳ ಬೇಡಿಕೆ ಮತ್ತು ಸಾಕಷ್ಟು ವರ್ಷಗಳ ವಿಳಂಬದ ನಂತರ, ನಗರದ ಪಶ್ಚಿಮ ಭಾಗದ ಪ್ರಮುಖ ಕೊಂಡಿಯಾದ ಹೊಸಕೆರೆಹಳ್ಳಿ ಜಂಕ್ಷನ್ ಫ್ಲೈಓವರ್ ಕಾಮಗಾರಿ ಸಂಪೂರ್ಣಗೊಂಡಿದ್ದು, ಬುಧವಾರ (ನವೆಂಬರ್ 12) ರಿಂದ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ಇದು ದೇವೇಗೌಡ ಪೆಟ್ರೋಲ್ ಬಂಕ್ ಮತ್ತು ನಾಯಂಡಹಳ್ಳಿ ನಡುವಿನ ಈ ಮಹತ್ವದ ಮಾರ್ಗದಲ್ಲಿ ನಿತ್ಯ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುತ್ತಿದ್ದ ಸಾವಿರಾರು ವಾಹನ ಸವಾರರಿಗೆ ಬಹುದೊಡ್ಡ ನಿರಾಳತೆ ನೀಡಿದೆ. ಇದರಿಂದಾಗಿ ಹೊಸಕೆರೆಹಳ್ಳಿ, ಇಟ್ಟಮಡು, ಆವಲಹಳ್ಳಿ, ಗಿರಿನಗರ, ಹನುಮಂತನಗರ, ನಾಯಂಡಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಹಾಗೂ ಇತರರಿಗೆ ವಾಹನದಟ್ಟಣೆಯಿಂದ ಕೊಂಚ ಪರಿಹಾರ ದೊರೆತಂತಾಗಿದೆ.
15 ತಿಂಗಳ ಕೆಲಸಕ್ಕೆ 54 ತಿಂಗಳು :
2021ರ ಮೇ ತಿಂಗಳಲ್ಲಿ ಆರಂಭಗೊಂಡು 2022ರ ಆಗಸ್ಟ್‌ನೊಳಗೆ ಪೂರ್ಣಗೊಳ್ಳಬೇಕಿದ್ದ 20.17 ಕೋಟಿ ರೂ. ವೆಚ್ಚದ ಈ 380 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿ, ಹಿಂದಿನ ಬಿಬಿಎಂಪಿ (BBMP) ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಅನುದಾನ ಬಿಡುಗಡೆಯಲ್ಲಿನ ವಿಳಂಬದಿಂದಾಗಿ ಗಡುವಿಗಿಂತ ಬರೋಬ್ಬರಿ 39 ತಿಂಗಳುಗಳಷ್ಟು ತಡವಾಗಿ ಪೂರ್ಣಗೊಂಡಿದೆ. ಮೂಲತಃ 15 ತಿಂಗಳಲ್ಲಿ ಮುಗಿಯಬೇಕಿದ್ದ ಯೋಜನೆ 54 ತಿಂಗಳು, ಅಂದರೆ 4.5 ವರ್ಷಗಳ ಬಳಿಕ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ.

ಈ ಕಾಮಗಾರಿ ಮತ್ತಷ್ಟು ತಡವಾಗುತ್ತದೆಂದು 2023ರ ಡಿಸೆಂಬರ್ 23ರಂದೇ ಬೆಂಗಳೂರು ವೈರ್ “BW SPECIAL | BENGALURU NEWS | ಬಿಬಿಎಂಪಿ ಎಂಜಿನಿಯರ್ ಗಳ ಯಡವಟ್ಟು : ಹೊಸಕೆರೆಹಳ್ಳಿ ಜಂಕ್ಷನ್ ಮೇಲ್ಸೇತುವೆ ಪೂರ್ಣವಾಗಲು ಇನ್ನು 1 ವರ್ಷ ಕಾಯಬೇಕು!!! – ತಪ್ಪದ ಟ್ರಾಫಿಕ್ ಕಿರಿಕಿರಿ” ಎಂಬ ಶೀರ್ಷಿಕೆ ನೀಡಿ ಸವಿವರವಾಗಿ ವಿಶೇಷ ವರದಿ ಪ್ರಸಾರ ಮಾಡಿತ್ತು.
ನಿಟ್ಟುಸಿರು ಬಿಟ್ಟ ಪ್ರಯಾಣಿಕರು :
ಕಾಮಗಾರಿ ಆರಂಭವಾದಾಗಿನಿಂದಲೂ, ದೇವೇಗೌಡ ಪೆಟ್ರೋಲ್ ಬಂಕ್ ಮತ್ತು ನಾಯಂಡಹಳ್ಳಿ ನಡುವಿನ ಎರಡೂ ಕಡೆಯ ಸರ್ವೀಸ್ ರಸ್ತೆಯಲ್ಲಿ ಪೀಕ್ ಹವರ್‌ಗಳಲ್ಲಿ ವಾಹನ ಸವಾರರು ಪ್ರತಿದಿನ ಗಂಟೆಗಟ್ಟಲೆ ಆಮೆಗತಿಯಲ್ಲಿ ಸಾಗುವ ಅನಿವಾರ್ಯತೆ ಎದುರಿಸುತ್ತಿದ್ದರು. ನಿರಂತರ ಸಂಚಾರ ದಟ್ಟಣೆಯಿಂದಾಗಿ ಈ ಪ್ರದೇಶದಲ್ಲಿ ಓಡಾಡುವುದು ನಿತ್ಯವೂ ವಾಹನ ಸವಾರರ ಪಾಲಿಗೆ ನರಕಯಾತನೆಯಾಗಿತ್ತು. ಪ್ರಸ್ತುತ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಹಿನ್ನೆಲೆಯಲ್ಲಿ, ವಾಹನಗಳು ನೇರವಾಗಿ ಮೇಲ್ಸೇತುವೆ ಮೂಲಕ ಸಾಗುತ್ತಿರುವುದರಿಂದ ಕೆಳಭಾಗದ ರಸ್ತೆಗಳಲ್ಲಿ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ನೂತನ ಮೇಲ್ಸೇತುವೆಯ ಮೇಲೆ ವಾಹನಗಳ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ನಂತರ, ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಿ, ಈ ಮೇಲ್ಸೇತುವೆಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಪಶ್ಚಿಮ ನಗರ ಪಾಲಿಕೆ (BBMP) ಮೂಲಗಳು ತಿಳಿಸಿವೆ. ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಇದೊಂದು ಸಕಾರಾತ್ಮಕ ಹೆಜ್ಜೆಯಾಗಿದೆ.






















