ಬೆಂಗಳೂರು, ನ.08 www.bengaluruwire.com : ಬೆಂಗಳೂರಿನ ಆರು ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್‌ಟಿಒ) ಭ್ರಷ್ಟಾಚಾರ ಮತ್ತು ಅಕ್ರಮಗಳ ಕೂಪಗಳಾಗಿ ಮಾರ್ಪಟ್ಟಿವೆ ಎಂಬ ಸಾರ್ವಜನಿಕ ದೂರುಗಳ ಮೇರೆಗೆ, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ನೇತೃತ್ವದಲ್ಲಿ ಆರು ತಂಡಗಳು ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ನಗರದ ಆರು ಪ್ರಮುಖ ಆರ್‌ಟಿಒ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿವೆ.
ಯಶವಂತಪುರ, ರಾಜಾಜಿನಗರ, ಜಯನಗರ, ಯಲಹಂಕ, ಕಸ್ತೂರಿನಗರ, ಹಾಗೂ ಕೆ.ಆರ್. ಪುರಂ ಕಚೇರಿಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಹಲವಾರು ಅಕ್ರಮಗಳು ಮತ್ತು ಲೋಪದೋಷಗಳು ಬೆಳಕಿಗೆ ಬಂದಿವೆ.
ಏಜೆಂಟರ ಬಳಿ ಸರ್ಕಾರಿ ದಾಖಲೆಗಳು:
ಕಸ್ತೂರಿ ನಗರದಲ್ಲಿ ಬೆಚ್ಚಿಬೀಳಿಸುವ ಸತ್ಯ

ದಾಳಿಯ ವೇಳೆ ಏಜೆಂಟರ ಹಾವಳಿ ಎಷ್ಟರಮಟ್ಟಿಗೆ ಬೇರೂರಿದೆ ಎಂಬುದು ಸ್ಪಷ್ಟವಾಗಿದೆ. ಕಸ್ತೂರಿನಗರ ಆರ್.ಟಿ.ಓ ಕಚೇರಿಯ ಮುಂದೆ ಇದ್ದ ‘ಮಾರುತಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಖಾಸಗಿ ಅಂಗಡಿಯನ್ನು ಪರಿಶೀಲಿಸಿದಾಗ, ಶ್ರೀ ರಜನೀಕಂತ ಎಂಬ ವ್ಯಕ್ತಿಯ ವಶದಲ್ಲಿ 49 ನೋಂದಣಿ ಪ್ರಮಾಣ ಪತ್ರಗಳು (RC) ಮತ್ತು 83 ಚಾಲನಾ ಪರವಾನಗಿಗಳು (DL) ಪತ್ತೆಯಾಗಿವೆ. ಈ ಸರ್ಕಾರಿ ದಾಖಲೆಗಳು ಮತ್ತು ಕಚೇರಿಯ ಸೀಲ್‌ಗಳು ಖಾಸಗಿ ವ್ಯಕ್ತಿಯ ಬಳಿ ಇರುವುದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ. ಈ ಸಂಬಂಧ, ಆರ್.ಟಿ.ಓ., ಎ.ಆರ್.ಟಿ.ಓ., ಸೂಪರಿಂಟೆಂಡೆಂಟ್ ಮತ್ತು ಖಾಸಗಿ ವ್ಯಕ್ತಿ ರಜನೀಕಾಂತ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಲೋಕಾಯುಕ್ತ ಡಿ.ವೈ.ಎಸ್.ಪಿ.ಗೆ ನಿರ್ದೇಶನ ನೀಡಲಾಗಿದೆ.
ಇದಲ್ಲದೆ, ಯಶವಂತಪುರದಲ್ಲಿ ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಓಡಿಹೋಗುತ್ತಿದ್ದ ಏಜೆಂಟರೊಬ್ಬನನ್ನು ಹಿಡಿದು ವಿಚಾರಿಸಿದಾಗ, ಆತನ ಬಳಿ ರೂ. 14,000 ನಗದು ದೊರೆತಿದೆ.
ವಿತರಣೆಯಾಗದ ಡಿಎಲ್, ಆರ್‌ಸಿಗಳ ರಾಶಿ :
ಹಲವು ಕಚೇರಿಗಳಲ್ಲಿ ಪ್ರಮುಖ ದಾಖಲೆಗಳನ್ನು ವಿತರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ. ರಾಜಾಜಿನಗರ ಕಚೇರಿಯಲ್ಲಿ 3,800 ಚಾಲನಾ ಪರವಾನಗಿ (DL) ಮತ್ತು 6,300 ನೋಂದಣಿ ಪ್ರಮಾಣ ಪತ್ರ (RC) ಸ್ಮಾರ್ಟ್ ಕಾರ್ಡ್‌ಗಳು ಮುದ್ರಣ ಮಾಡಲು ಬಾಕಿ ಇರುವುದು ಪತ್ತೆಯಾಗಿದೆ. ಹೊರ ಗುತ್ತಿಗೆ ಪಡೆದ ‘ರೋಸ್ ಮಾರ್ಟ್’ ಕಂಪನಿಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಆರ್.ಟಿ.ಓ. ವಿವರಣೆ ನೀಡಿದ್ದಾರೆ.
ಯಶವಂತಪುರದಲ್ಲಿ 2095 ಡಿಎಲ್‌ಗಳನ್ನು ಪ್ರಿಂಟ್ ಮಾಡಲು ಮತ್ತು 789 ಡಿಎಲ್‌ಗಳನ್ನು ಸಂಬಂಧಿಸಿದವರಿಗೆ ರವಾನಿಸಲು ಬಾಕಿ ಇರಿಸಿಕೊಂಡಿರುವುದು ಕಂಡುಬಂದಿದೆ. ಜಯನಗರ ಕಚೇರಿಯಲ್ಲಿ, ಅಂಚೆ ಇಲಾಖೆಯಿಂದ ವಾಹನ ಮಾಲೀಕರ ವಿಳಾಸಕ್ಕೆ ಜಾರಿಯಾಗದೆ ಹಿಂದಿರುಗಿ ಬಂದಿದ್ದ ಸುಮಾರು 1300 ಆರ್.ಸಿ ಕಾರ್ಡುಗಳನ್ನು ಕಚೇರಿಯಲ್ಲಿಯೇ ಇರಿಸಿಕೊಂಡಿರುವುದು ಕಂಡು ಬಂದಿದೆ. ಇದರಿಂದಾಗಿ ಸಾರ್ವಜನಿಕರು ನಾಲ್ಕು ತಿಂಗಳಿಂದ ಅಲೆದಾಡುತ್ತಿರುವುದಾಗಿ ದೂರಿದರು.
ನಗದು ಘೋಷಣೆ, ಡ್ರೆಸ್ ಕೋಡ್ ಉಲ್ಲಂಘನೆ :
ಜಯನಗರ, ಯಲಹಂಕ, ಕಸ್ತೂರಿನಗರ ಮತ್ತು ಕೆ.ಆರ್. ಪುರಂ ಕಚೇರಿಗಳಲ್ಲಿ ನಗದು ಘೋಷಣಾ ವಹಿ, ಚಲನ-ವಲನ ವಹಿ ಮತ್ತು ಹಾಜರಾತಿ ವಹಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಸಮರ್ಪಕವಾಗಿ ನಿರ್ವಹಿಸಿಲ್ಲದಿರುವುದು ಕಂಡುಬಂದಿದೆ. ಅಲ್ಲದೆ, ಕೆ.ಆರ್. ಪುರಂ ಕಚೇರಿಯಲ್ಲಿ ದೂರುದಾರರೊಬ್ಬರು ಸರ್ಕಾರಿ ಶುಲ್ಕ ಪಾವತಿಸಿದಾಗ ಉಳಿದ ರೂ. 120 ಬಾಕಿ ಮೊತ್ತವನ್ನು ಅಧಿಕಾರಿಗಳು ಹಿಂದಿರುಗಿಸಿರುವುದಿಲ್ಲವೆಂದು ಪ್ರಾದೇಶಿಕ ಅಧಿಕಾರಿಗಳ ಸಮುಖದಲ್ಲಿಯೇ ತಿಳಿಸಿರುತ್ತಾರೆ.
ಕೆ.ಆರ್. ಪುರಂ ಮತ್ತು ಕಸ್ತೂರಿ ನಗರ ಕಚೇರಿಗಳಲ್ಲಿ ಸಿಬ್ಬಂದಿಗಳು ಸರ್ಕಾರದ ಮಾರ್ಗಸೂಚಿಯಂತೆ ವಸ್ತ್ರಗಳನ್ನು (ಡ್ರೆಸ್‌ಕೋಡ್) ಧರಿಸದೇ, ಜೀನ್ಸ್ ಪ್ಯಾಂಟ್ ಮತ್ತು ಟಿ-ಶರ್ಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಪತ್ತೆಯಾಗಿದೆ.
ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಸೂಚನೆ ನೀಡಿದ್ದಾರೆ.






















