ಬೆಂಗಳೂರು, ನ.07 www.bengaluruwire.com: ಕನ್ನಡದ ಜನಪ್ರಿಯ ನಟ, ‘ಆಟೋ ರಾಜ’ ಎಂದೇ ಖ್ಯಾತಿ ಪಡೆದ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಜನ್ಮದಿನಾಚರಣೆ ಮತ್ತು ಡಾ. ವಿಷ್ಣುವರ್ಧನ್ ಅವರಿಗೆ ನಮನ ಸಲ್ಲಿಸಲು ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್ ವತಿಯಿಂದ 12ನೇ ವರ್ಷದ ‘ಚಾಲಕರ ದಿನಾಚರಣೆ’ಯನ್ನು ಆಯೋಜಿಸಲಾಗಿದೆ.
ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಈ ಕಾರ್ಯಕ್ರಮವು ನವೆಂಬರ್ 9ರಂದು ಬೆಂಗಳೂರಿನ ಜಯನಗರದ ಚಂದ್ರಗುಪ್ತ ಆಟದ ಮೈದಾನ (ಶಾಲೀನಿ ಗ್ರೌಂಡ್)ದಲ್ಲಿ ನಡೆಯಲಿದೆ.
ಕರುನಾಡಿನ ಕಲಾವಿದರಿಗೆ ಗೌರವ: ವಿಶೇಷ ಟ್ಯಾಬ್ಲೊ
ಈ ಚಾಲಕರ ದಿನಾಚರಣೆಯ ಪ್ರಯುಕ್ತ, ಆಟೋ ಚಾಲಕರೊಬ್ಬರು ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿ ಹಾಗೂ ಕರುನಾಡಿನ ಹೆಮ್ಮೆಯ ನಟರಾದ ಶಂಕರ್ ನಾಗ್ ಮತ್ತು ಡಾ. ವಿಷ್ಣುವರ್ಧನ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ವಿಶೇಷ ಟ್ಯಾಬ್ಲೊವನ್ನು ಸಿದ್ಧಪಡಿಸಿದ್ದಾರೆ.


ಹಂಪೆಯ ವಿಶ್ವವಿಖ್ಯಾತ ಕಲ್ಲಿನ ರಥದ ಮಾದರಿಯಲ್ಲಿ ನಿರ್ಮಿಸಲಾಗಿರುವ ಈ ಟ್ಯಾಬ್ಲೊದಲ್ಲಿ ಶಂಕರ್ ನಾಗ್, ಡಾ. ವಿಷ್ಣುವರ್ಧನ್ ಅವರ ಭಾವಚಿತ್ರದ ಜೊತೆಗೆ ತಾಯಿ ಭುವನೇಶ್ವೆರಿಯ ದಿವ್ಯ ಭಾವಚಿತ್ರವನ್ನು ಅಳವಡಿಸಲಾಗಿದೆ. ಚಾಲಕ ಸಮುದಾಯದ ಹೆಮ್ಮೆಯನ್ನು ಬಿಂಬಿಸುವ ಈ ಟ್ಯಾಬ್ಲೊವು ನವೆಂಬರ್ 1ರಿಂದ 9ರ ತನಕ ನಗರದಾದ್ಯಂತ ಸಂಚರಿಸಿ ಜನಮನ ಸೆಳೆಯಲಿದೆ.
ಸಂಘದ ಅಧ್ಯಕ್ಷ ರಘು ಎನ್. ಹೇಳಿದ್ದಿಷ್ಟು, ಈ ಕಾರ್ಯಕ್ರಮದ ಯಶಸ್ವಿ ಆಯೋಜನೆಯ ನೇತೃತ್ವವನ್ನು ವಹಿಸಿರುವ ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ರಘು.ಎನ್. ಅವರು ಮಾತನಾಡಿ, “ನಮ್ಮ ಸಂಘವು ಪ್ರತಿ ವರ್ಷವೂ ಶಂಕರ್ ನಾಗ್ ಅವರ ಜನ್ಮದಿನದಂದು ಚಾಲಕರ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದೆ.
ಈ ವರ್ಷ ಡಾ.ವಿಷ್ಣುವರ್ಧನ್ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರ ಹಿತರಕ್ಷಣೆ ಮತ್ತು ಕನ್ನಡದ ಹೆಮ್ಮೆಯನ್ನು ಎತ್ತಿ ಹಿಡಿಯುವುದು ನಮ್ಮ ಸಂಘದ ಪ್ರಮುಖ ಉದ್ದೇಶವಾಗಿದೆ. ನಗರದ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು,” ಎಂದು ಕರೆ ನೀಡಿದ್ದಾರೆ.























