ಬೆಂಗಳೂರು, ನ. 3 www.bengaluruwire.com: ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಐದು ‘ಖಾತರಿ’ (ಗ್ಯಾರಂಟಿ) ಯೋಜನೆಗಳ ಕುರಿತು ಪ್ರತಿಷ್ಠಿತ ಐದು ಸಂಶೋಧನಾ ಸಂಸ್ಥೆಗಳು ಕೈಗೊಂಡಿರುವ ಅಧ್ಯಯನಗಳ ಸಂಶೋಧನಾ ಫಲಿತಾಂಶಗಳನ್ನು ಹಾಗೂ ಪ್ರಮುಖ ಕಾರ್ಯನೀತಿ (ಪಾಲಿಸಿ) ಸಲಹೆಗಳನ್ನು ಹಂಚಿಕೊಳ್ಳಲು ಒಂದು ದಿನದ ಕಾರ್ಯಕ್ರಮವನ್ನು ನವೆಂಬರ್ 5 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ರಾಜ್ಯದ ವಿತ್ತೀಯ ಕಾರ್ಯನೀತಿ ಸಂಸ್ಥೆ (FPI) ಆರ್ಥಿಕ ಇಲಾಖೆಯ ಅಧೀನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ಎಂ.ಜಿ.ರಸ್ತೆಯ ಹೋಟೆಲ್ ತಾಜ್‌ನ ಟ್ರಿನಿಟಿ ಸಭಾಂಗಣದಲ್ಲಿ ನಡೆಯಲಿರುವ ಈ ಅವಲೋಕನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ.
ಪ್ರಮುಖವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು:
* ಕಾರ್ಯಕ್ರಮ ಉದ್ಘಾಟನೆ ಮತ್ತು ಭಾಷಣ: ಮುಖ್ಯಮಂತ್ರಿ ಸಿದ್ದರಾಮಯ್ಯ

* ಪ್ರಧಾನ ಭಾಷಣ: ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ. ಸೌಮ್ಯ ಸ್ವಾಮಿನಾಥನ್.
* ಕಾರ್ಯನೀತಿ ಸನ್ನಿವೇಶಗಳಲ ವಿವರಣೆ: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್.
ಸಂಸ್ಥೆಗಳ ಸಹಭಾಗಿತ್ವ:
ಆರ್ಥಿಕ ಇಲಾಖೆಯ ನಿರ್ದೇಶನಾಲಯವಾದ ರಾಜ್ಯ ವಿತ್ತೀಯ ಕಾರ್ಯನೀತಿ ಸಂಸ್ಥೆ (ಎಫ್.ಪಿ.ಐ) ಈ ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಾತ್ಮಕ ಮೌಲ್ಯಮಾಪನಕ್ಕಾಗಿ ಐದು ಸಂಶೋಧನಾ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದೆ.
ಅಧ್ಯಯನ ನಡೆಸಿದ ಸಂಸ್ಥೆಗಳು:
* ಲಂಡನ್ನಿನ ಕಿಂಗ್ಸ್ ಕಾಲೇಜ್
* ಮುಂಬೈನ ಎಕ್ಸ್.ಕೆ.ಡಿ.ಆರ್. ಫೋರಂ ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ
* ಲೋಕ್‌ನೀತಿ-ಸಿಎಸ್‌ಡಿಎಸ್
* ಇಂಡಸ್ ಆಕ್ಷನ್ ಹಾಗೂ ಜಸ್ಟ್ ಜಾಬ್ಸ್ ನೆಟ್‌ವರ್ಕ್ಸ್
ಈ ಸಂಸ್ಥೆಗಳು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿವಿಧ ಆಯಾಮಗಳ ಕುರಿತು ಆಳವಾದ ಅಧ್ಯಯನವನ್ನು ನಡೆಸಿವೆ.
ವಿವಿಧ ತಾಂತ್ರಿಕ ಅಧಿವೇಶನಗಳು:
ಕಾರ್ಯಕ್ರಮದಲ್ಲಿ ಹಲವು ತಾಂತ್ರಿಕ ಅಧಿವೇಶನಗಳು ನಡೆಯಲಿದ್ದು, ಪ್ರಮುಖವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇ-ಆಡಳಿತದ ಪಾತ್ರ ಮತ್ತು ಐದು ಯೋಜನೆಗಳ ಪರಿಣಾಮಾತ್ಮಕ ಮೌಲ್ಯಮಾಪನ ಕುರಿತು ಚರ್ಚೆ ನಡೆಯಲಿದೆ. ಅಲ್ಲದೇ, ಶಕ್ತಿ ಯೋಜನೆಯ ಪರಿಣಾಮಾತ್ಮಕ ಮೌಲ್ಯಮಾಪನ ಹಾಗೂ ತಜ್ಞರ ಚರ್ಚೆಗೆ ವಿಶೇಷ ಒತ್ತು ನೀಡಲಾಗಿದೆ. ಸರ್ಕಾರದ ಉನ್ನತ ಅಧಿಕಾರಿಗಳು, ಶೈಕ್ಷಣಿಕ ಸಂಸ್ಥೆಗಳ ಮತ್ತು ಸಂಶೋಧನಾ ತಜ್ಞರು ಪ್ರತಿ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ಸಮಾರೋಪ ಭಾಷಣ:
ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್ ನೆರವೇರಿಸಲಿದ್ದಾರೆ. ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮವು ಸಂಶೋಧನಾ ಅಧ್ಯಯನಗಳ ಮೌಲ್ಯಯುತ ಮಾಹಿತಿ ನೀಡುವುದರ ಜೊತೆಗೆ, ಗ್ಯಾರಂಟಿ ಯೋಜನೆಗಳ ಕಾರ್ಯನೀತಿ ವಿನ್ಯಾಸ, ಅನುಷ್ಠಾನ ಮತ್ತು ನಿರೀಕ್ಷಿತ ಪರಿಣಾಮಗಳ ಕುರಿತು ಸಮಗ್ರ ಅವಲೋಕನ ಒದಗಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






















