ಹಾಸನ, ನ.03 www.bengaluruwire.com : ರಾಜ್ಯದಲ್ಲಿ ವಿದ್ಯುತ್ ಪೂರೈಕೆಯನ್ನು ಸುಧಾರಿಸಲು ಅಗತ್ಯವಿರುವಷ್ಟು ಜಾಗ ನೀಡಿದರೆ ಇನ್ನಷ್ಟು ವಿದ್ಯುತ್ ಉಪಕೇಂದ್ರಗಳನ್ನು (ಸಬ್‌ಸ್ಟೇಷನ್) ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸೂಳೆಕೆರೆ(ಆಗ್ಗುಂದ) ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಸಿಟಿಎಲ್) ನಿರ್ಮಿಸಿರುವ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ, ಗೃಹ ಬಳಕೆಗೆ ಆದ್ಯತೆ:
“ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಈಗಾಗಲೇ 100 ಸಬ್‌ಸ್ಟೇಷನ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ. ಜಾಗದ ಕೊರತೆಯಿಂದ ಬೇಡಿಕೆಗೆ ತಕ್ಕಷ್ಟು ಉಪಕೇಂದ್ರಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಸೂಕ್ತ ಜಾಗ ದೊರೆತರೆ ಈ ಸಮಸ್ಯೆ ನಿವಾರಿಸಲಾಗುವುದು,” ಎಂದು ಸಚಿವರು ತಿಳಿಸಿದರು.

ನಿರಂತರ ಜ್ಯೋತಿ ಯೋಜನೆಯಡಿ ಗೃಹಬಳಕೆಗೆ ನಿರಂತರ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಲೋಪವಿಲ್ಲದೆ ವಿದ್ಯುತ್ ಸಿಗಲು ಮೂಲಸೌಕರ್ಯ ಹೆಚ್ಚಳಕ್ಕೆ ಸರ್ಕಾರ ಆದ್ಯತೆ ನೀಡಿದೆ ಎಂದರು.
ಕುಸುಮ್-ಸಿ ಯೋಜನೆಯಡಿ ಸೌರ ಶಕ್ತಿ:
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 7 ಗಂಟೆ ವಿದ್ಯುತ್ ಪೂರೈಸುವ ಮಹತ್ವಾಕಾಂಕ್ಷೆಯ ಕುಸುಮ್-ಸಿ ಯೋಜನೆಯಡಿ ರಾಜ್ಯದಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ವಹಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ₹10 ಸಾವಿರ ಕೋಟಿ ಹೂಡಿಕೆ ಆಗುತ್ತಿದ್ದು, ಇದು ಪೂರ್ಣಗೊಂಡರೆ ಕೃಷಿ ಪಂಪ್‌ಸೆಟ್‌ಗಳ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ ಎಂದು ಜಾರ್ಜ್ ಹೇಳಿದರು.
ಇದೇ ವೇಳೆ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು, ಕಾಡಂಚಿನ ಗ್ರಾಮಗಳಲ್ಲಿನ ಸಮಸ್ಯೆ ನಿವಾರಣೆಗೆ ನಿರಂತರ ಜ್ಯೋತಿ ಮೂಲಕ ಕ್ರಮವಹಿಸಿ, ಇನ್ನಷ್ಟು ಸಬ್‌ಸ್ಟೇಷನ್‌ಗಳನ್ನು ಸ್ಥಾಪಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಇದಕ್ಕೂ ಮುನ್ನ ಸಚಿವ ಜಾರ್ಜ್ ಅವರು ಸಂಕೋಡನಹಳ್ಳಿಯಲ್ಲಿ 25 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಕುಸುಮ್-ಸಿ ಸೋಲಾರ್ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲಿಸಿ, ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಬಾಕಿ ಉಳಿದಿದ್ದ 3 ಲಕ್ಷಕ್ಕೂ ಅಧಿಕ ಅಕ್ರಮ ಕೃಷಿ ಪಂಪ್‌ಸೆಟ್‌ಗಳ ಸಂಪರ್ಕಗಳನ್ನು ಸಕ್ರಮಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.






















