ಬೆಂಗಳೂರು, ನ.01 www.bengaluruwire.com : ರಾಜ್ಯದಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಅನುಷ್ಠಾನಕ್ಕೆ ವೇಗ ನೀಡಲು ‘ಸಿಟಿ ಆಕ್ಸಿಲರೇಟರ್’ (ನಗರ ವೇಗವರ್ಧಕ) ಕಾರ್ಯಕ್ರಮಕ್ಕೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಶುಕ್ರವಾರ ಚಾಲನೆ ನೀಡಿದರು.
ಮೊದಲ ಹಂತದಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಮೇಲ್ಛಾವಣಿ ಸೌರ (ಆರ್‌ಟಿಎಸ್) ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ), ಶಕ್ತಿ ಸಸ್ಟೇನಬಲ್ ಎನರ್ಜಿ ಫೌಂಡೇಶನ್, ನಾಲೆಡ್ಜ್ ಪಾರ್ಟನರ್ ಕೆಪಿಎಂಜಿ ಮತ್ತು ಬೆಸ್ಕಾಂ ಸಹಯೋಗದಲ್ಲಿ ಈ ಕಾರ್ಯಕ್ರಮ ಆರಂಭಿಸಲಾಗಿದೆ. ಈ ಉಪಕ್ರಮದಡಿ ವಿದ್ಯುತ್ ವಿತರಣಾ ಕಂಪನಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ನೆರವು ಒದಗಿಸಲಾಗುತ್ತದೆ. ದೇಶಾದ್ಯಂತ ಹಂತ ಹಂತವಾಗಿ 100 ನಗರಗಳಲ್ಲಿ ಇದನ್ನು ಜಾರಿಗೆ ತರಲಾಗುವುದು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು, ಈ ಯೋಜನೆಯ ಮಹತ್ವವನ್ನು ಒತ್ತಿ ಹೇಳಿದರು.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, “ಪಿಎಂ-ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯು ನವೀಕರಿಸಬಹುದಾದ ಇಂಧನ ಬಳಕೆಗೆ ಒತ್ತು ನೀಡುವ ಸರ್ಕಾರದ ಉಪಕ್ರಮವಾಗಿದೆ. ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಮನೆಗಳಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದ್ದು, ಇದರಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿಯ ಗುರಿ ತಲುಪಲು ಸುಲಭವಾಗಲಿದೆ.”
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್ ಅವರು ಸಹ ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡುವಂತೆ ಹೇಳಿದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್. ಶಿವಶಂಕರ್ ಮಾತನಾಡಿ, “ಸುಸ್ಥಿರ ವಿದ್ಯುತ್ ಉತ್ಪಾದನೆ ಹಾಗೂ ಬಳಕೆಗೆ ರೂಪಿಸಿರುವ ಪಿಎಂ ಸೂರ್ಯಘರ್ ಯೋಜನೆಯನ್ನು ಅಳವಡಿಸಿಕೊಳ್ಳುವುದರಿಂದ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆ ತಗ್ಗುವುದು. ಪರಿಸರ ಸ್ನೇಹಿಯೂ ಆದ ಸೌರ ವಿದ್ಯುತ್ತಿನ ಬಳಕೆಯಿಂದ ಹಣದ ಉಳಿತಾಯವೂ ಸಾಧ್ಯವಾಗಲಿದೆ. ರಾಜ್ಯದಲ್ಲಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ನೋಡಲ್ ಏಜೆನ್ಸಿಯಾಗಿರುವ ಬೆಸ್ಕಾಂ ಒತ್ತು ನೀಡುತ್ತಿದೆ.”
ಈ ಯೋಜನೆಯು ಗ್ರಿಡ್ ಸಂಪರ್ಕದೊಂದಿಗೆ ಅಳವಡಿಸಿದರೆ 25 ವರ್ಷಗಳವರೆಗೆ ವಿದ್ಯುತ್ ಬಿಲ್ ಪಾವತಿಸುವುದರಿಂದ ವಿನಾಯಿತಿ ನೀಡುತ್ತದೆ ಮತ್ತು ಇದಕ್ಕೆ ಹೆಚ್ಚುವರಿ ಜಾಗದ ಅಗತ್ಯವಿಲ್ಲ. ಕೇಂದ್ರ ಸರ್ಕಾರದ pmsuryaghar.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆಯಡಿಯಲ್ಲಿ, 1 ಕಿ.ಲೋ ವ್ಯಾಟ್‌ಗೆ ₹30,000, 2 ಕಿಲೋ ವ್ಯಾಟ್‌ಗೆ ₹60,000 ಮತ್ತು 3 ಕಿಲೋ ವ್ಯಾಟ್ ಹಾಗೂ ಮೇಲ್ಪಟ್ಟ ಸಾಮರ್ಥ್ಯದ ವ್ಯವಸ್ಥೆಗೆ ಗರಿಷ್ಠ ₹78,000 ಸಬ್ಸಿಡಿ ಲಭ್ಯವಿದೆ.























