ಬೆಂಗಳೂರು, ನ.01 www.bengaluruwire.com : ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ಗೆ (Nehru Zoological Park) ಪ್ರಾಣಿ ವಿನಿಮಯ ಕಾರ್ಯಕ್ರಮದ ಭಾಗವಾಗಿ ಸ್ಥಳಾಂತರಿಸಲು ಸಿದ್ಧತೆ ನಡೆಸಿದ್ದ ಒಂದು ಹೆಣ್ಣು ಕಾಡೆಮ್ಮೆ (Bison) ಕಾರ್ಯಾಚರಣೆಯ ವೇಳೆ ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
ಪಶುವೈದ್ಯಕೀಯ ಮತ್ತು ಅರಣ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿ ಸ್ಥಳಾಂತರ ಪ್ರಕ್ರಿಯೆ ನಡೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಏನಿದು ಘಟನೆ?:
ಅಕ್ಟೋಬರ್ 31 ರಂದು ಸುಮಾರು 11 ಗಂಟೆ ಸಮಯದಲ್ಲಿ ಪ್ರಾಣಿಯನ್ನು ಕ್ವಾರಂಟೈನ್ ಆವರಣಕ್ಕೆ ರವಾನಿಸುವ ಸಂದರ್ಭದಲ್ಲಿ ಹೆಣ್ಣು ಕಾಡೆಮ್ಮೆಯು ಸಾವನ್ನಪ್ಪಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ್ ಸೂರ್ಯಸೇನ್ ಅವರು ತಿಳಿಸಿದ್ದಾರೆ.

ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಒಂದು ಟನ್ ತೂಕದ, 3-4 ವರ್ಷ ವಯಸ್ಸಿನ ಈ ಕಾಡೆಮ್ಮೆಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಗಿತ್ತು. ಅದನ್ನು ಕೂಗಳತೆಯ ದೂರದಲ್ಲಿದ್ದ ಕ್ವಾರಂಟೈನ್ ಸ್ಥಳಕ್ಕೆ ವಾಹನದ ಮೂಲಕ ಕರೆದೊಯ್ಯಲು ಬೆಲ್ಟ್‌ನಿಂದ ಬಿಗಿದು ಎತ್ತುವ ಪ್ರಯತ್ನ ನಡೆಸಲಾಯಿತು. ಈ ವೇಳೆ ಪ್ರಾಣಿಯು ಎಚ್ಚರಗೊಂಡು, ವಾಹನಕ್ಕೆ ಸಾಗಿಸುವ ಹಂತದಲ್ಲಿ ಗಲಿಬಿಲಿಗೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಈ ಹಠಾತ್ ಪ್ರಯತ್ನದಿಂದಾಗಿ ಎದೆಯ ಭಾಗದಲ್ಲಿ ಬೆಲ್ಟ್ ಜಾಸ್ತಿ ಬಿಗಿದು ಪ್ರಾಣಿಗೆ ಉಸಿರುಗಟ್ಟಿ (Asphyxiation) ಸಾವನ್ನಪ್ಪಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ.
ವೈದ್ಯರ ನಿರ್ಲಕ್ಷ್ಯದ ಆರೋಪ :
ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಪಶುವೈದ್ಯಕೀಯ ಬೆಂಬಲದ ಹೊರತಾಗಿಯೂ ಈ ದುರದೃಷ್ಟಕರ ಘಟನೆ ನಡೆದಿದ್ದು, ಕಾರ್ಯಾಚರಣೆಯ ಸಮಯದಲ್ಲಿ ಪ್ರಾಣಿ ಸಾವನ್ನಪ್ಪಿದೆ. ಆದರೆ, ಪ್ರಾಣಿ ಸ್ಥಳಾಂತರ ಪ್ರಕ್ರಿಯೆಯಲ್ಲಿ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವೈದ್ಯರು ನೀಡಿದ ಅರವಳಿಕೆ ಮದ್ದಿನ ಅಡ್ಡಪರಿಣಾಮದಿಂದಾಗಿ ಕಾಡೆಮ್ಮೆ ಸಾವನ್ನಪ್ಪಿತೇ ಎಂಬ ಸಂಶಯವು ಮೂಡಿದೆ.
ಮರಣೋತ್ತರ ಪರೀಕ್ಷೆ ಮತ್ತು ಮುಂದಿನ ಕ್ರಮ
ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಪ್ರಾಣಿ ಮೃತಪಡಲು ನಿಖರ ಕಾರಣ ತಿಳಿಯಲು ಅದರ ದೇಹದ ಕೆಲವು ಮಾದರಿಗಳನ್ನು ಹೆಬ್ಬಾಳದ ಪಶುವೈದ್ಯಕೀಯ ವಿದ್ಯಾಲಯಕ್ಕೆ (Veterinary College, Hebbal) ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ, ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ಗೆ ಈಗಾಗಲೇ ಗೊತ್ತು ಮಾಡಿದ ಗಂಡು ಕಾಡೆಮ್ಮೆ ಜೊತೆಗೆ ಇನ್ನೊಂದು ಹೆಣ್ಣು ಕಾಡೆಮ್ಮೆಯನ್ನು ನೀಡಬೇಕಾ ಅಥವಾ ಬೇರೆ ವಯಸ್ಸಿನ ಜೋಡಿಯನ್ನು ಕಳುಹಿಸಬೇಕಾ ಎಂದು ವೈದ್ಯರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಶಾಲ್ ಸೂರ್ಯಸೇನ್ ತಿಳಿಸಿದ್ದಾರೆ.

ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 20ಕ್ಕೂ ಹೆಚ್ಚು ಕಾಡೆಮ್ಮೆಗಳಿವೆ. ಮೃತಪಟ್ಟ ಕಾಡೆಮ್ಮೆ ಒಂದು ವರ್ಷದ ಹಿಂದೆ ಮರಿ ಹಾಕಿತ್ತು. ಹೈದರಾಬಾದ್‌ನಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ, ಬೇರೆ ವಂಶ/ರಕ್ತದ ಗುಂಪಿನ ಒಂದು ಹೆಣ್ಣು ಕಾಡೆಮ್ಮೆಯನ್ನು ಹಾಗೂ ಅಪರೂಪದ ಇಲಿಮೂತಿಯಂತಿರುವ ಐದು ಜಿಂಕೆಗಳನ್ನು (Mouse Deer) ವಿನಿಮಯ ಮಾಡಿಕೊಳ್ಳಬೇಕಿತ್ತು. ಈ ಘಟನೆಯಿಂದಾಗಿ ವಿನಿಮಯ ಪ್ರಕ್ರಿಯೆ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ. ಬೇರೆ ಸಂತಾನದ ಕಾಡೆಮ್ಮೆಯನ್ನು ತರುವುದರಿಂದ ಇಲ್ಲಿನ ಕಾಡೆಮ್ಮೆಗಳ ಸಂತಾನದಲ್ಲಿ ವೈವಿಧ್ಯತೆ ಕಾಯ್ದುಕೊಳ್ಳಲು ಸಹಾಯವಾಗುತ್ತದೆ ಎಂದು ಸೂರ್ಯಸೇನ್ ವಿವರಿಸಿದರು.
ಇಲಿ ಜಿಂಕೆ ಅಥವಾ ಚೆವ್ರೊಟೈನ್ ನಂಬಲಾಗದಷ್ಟು ಆಕರ್ಷಕ ಜಾತಿಯಾಗಿದ್ದು, ವಿಜ್ಞಾನಕ್ಕೆ ಇನ್ನೂ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲ. ಅದರ ಹೆಸರಿನ ಹೊರತಾಗಿಯೂ, ಇಲಿ ಜಿಂಕೆ ದಂಶಕ ಅಥವಾ ಜಿಂಕೆ ಕುಟುಂಬಗಳಿಗೆ ಸೇರಿಲ್ಲ. ವಾಸ್ತವವಾಗಿ, ಇಲಿ ಜಿಂಕೆಗಳು ಒಂದೇ ರೀತಿ ಕಾಣುವ ಪ್ರಾಣಿಗಳೊಂದಿಗೆ ಹೊಂದಿರುವ ಏಕೈಕ ಸಂಪರ್ಕವೆಂದರೆ ಅದು ಒಂಟೆಗಳು, ಜಿರಾಫೆಗಳು ಮತ್ತು ಖಾವೊ ಸೋಕ್‌ನ ಸ್ವಂತ ಕಾಡುಹಂದಿಗಳು ಮತ್ತು ಗೌರ್‌ಗಳಂತಹ ಸಸ್ತನಿಗಳೊಂದಿಗೆ ಗೊರಸುಳ್ಳ ಪ್ರಾಣಿ.























