ಬೆಂಗಳೂರು, ಅ.31 www.bengaluruwire.com : ಕನ್ನಡ ಚಿತ್ರರಂಗದ ಸಾಧಕರಿಗೆ ನೀಡಲಾಗುವ 2019 ನೇ ಸಾಲಿನ ರಾಜ್ಯ ಚಲನಚಿತ್ರ ಜೀವಮಾನ ಸಾಧನೆ ಪ್ರಶಸ್ತಿಗಳ ವಿಜೇತರನ್ನು ಸರ್ಕಾರ ಘೋಷಿಸಿದೆ. ನವೆಂಬರ್ 3 ರಂದು ಮೈಸೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಹಿರಿಯ ನಟಿ, ನಿರ್ದೇಶಕಿ ಮತ್ತು ರಾಜಕಾರಣಿ ಉಮಾಶ್ರೀ ಅವರಿಗೆ ಪ್ರತಿಷ್ಠಿತ ಡಾ.ರಾಜಕುಮಾರ್ ಪ್ರಶಸ್ತಿ ಸಂದಿದೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ರಾಷ್ಟ್ರೀಯ ಪ್ರಶಸ್ತಿ (ಗುಲಾಬಿ ಟಾಕೀಸ್) ಗಳಿಸಿ, ಕನ್ನಡ ಚಿತ್ರರಂಗದ ದಂತಕತೆಯಾಗಿರುವ ಉಮಾಶ್ರೀ ಅವರು ರಂಗಭೂಮಿ ಮತ್ತು ಸಿನಿಮಾ ಎರಡರಲ್ಲೂ ಅಪಾರ ಸಾಧನೆ ಮಾಡಿದ್ದಾರೆ.
ನಿರ್ದೇಶಕರಾದ ಎನ್.ಆರ್. ನಂಜುಂಡೇಗೌಡ ಅವರು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಕ್ಕಳ ಚಿತ್ರಗಳು, ‘ಹೆಬ್ಬೆಟ್ರಾಮಕ್ಕ’ (ರಾಷ್ಟ್ರೀಯ ಪ್ರಶಸ್ತಿ) ಮುಂತಾದ ಗುಣಮಟ್ಟದ ಚಿತ್ರಗಳನ್ನು ನೀಡಿದ ಇವರು, ಚಲನಚಿತ್ರ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.
ತುಳು, ಕೊಂಕಣಿ, ಕೊಡವ ಮತ್ತು ಕನ್ನಡ ಸೇರಿದಂತೆ ಬಹುಭಾಷಾ ನಿರ್ದೇಶಕ ರಿಚಾರ್ಡ್ ಕ್ಯಾಸ್ಟೆಲಿನೋ ಅವರಿಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 24 ಗಂಟೆಯಲ್ಲಿ ಚಿತ್ರೀಕರಿಸಿದ ‘ಸೆಪ್ಟೆಂಬರ್ 8’ ವಿಶ್ವದಾಖಲೆ ಹಾಗೂ ‘ಬಂಗಾರ ಪಟ್ಲೆರ್’ನಂತಹ ಪ್ರಶಸ್ತಿ ವಿಜೇತ ಚಿತ್ರಗಳನ್ನು ಇವರು ನೀಡಿದ್ದಾರೆ.

ಈ ಮೂರು ಜೀವಮಾನ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಮತ್ತು 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿವೆ.
ಇನ್ನು, 2019ರ ಅತ್ಯುತ್ತಮ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಪತ್ರಕರ್ತ ರಘುನಾಥ ಚ.ಹ. ಅವರ “ಬೆಳ್ಳಿ ತೊರೆ” ಸಿನೆಮಾ ಪ್ರಬಂಧಗಳು ಕೃತಿ ಆಯ್ಕೆಯಾಗಿದೆ. ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗಾಗಿ ಶ್ರೀನಾಥ್ ಎಸ್ ಹಡಗಲಿ ನಿರ್ದೇಶನದ “ಗುಳೆ” ಕಿರುಚಿತ್ರವು ಪುರಸ್ಕೃತವಾಗಿದೆ. ಪ್ರಶಸ್ತಿ ವಿಜೇತರ ಮಾಹಿತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























