ಬೆಂಗಳೂರು, ಅ.31 www.bengaluruwire.com : ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 70 ಮಹನೀಯರಿಗೆ 2025ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸರ್ಕಾರವು ಆದೇಶ ಹೊರಡಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ವೆಂಕಟೇಶ್ ಎಂ.ವಿ. ಅವರು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರದ ಹಿರಿಯ ನಟ ಪ್ರಕಾಶ್ ರಾಜ್ (ದಕ್ಷಿಣ ಕನ್ನಡ) ಮತ್ತು ವಿಜಯಲಕ್ಷ್ಮಿ ಸಿಂಗ್ (ಕೊಡಗು) ಸೇರಿದಂತೆ ಸಾಹಿತ್ಯ, ಕಲೆ, ವಿಜ್ಞಾನ, ಕೃಷಿ, ಸಮಾಜಸೇವೆ, ಮಾಧ್ಯಮ, ಕ್ರೀಡೆ, ವೈದ್ಯಕೀಯ ಸೇರಿದಂತೆ ಹಲವು ವಿಭಾಗಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಈ ಬಾರಿ ಪ್ರಶಸ್ತಿ ಒಲಿದಿದೆ.
ಪ್ರಮುಖ ಪ್ರಶಸ್ತಿ ವಿಜೇತರ ಒಂದು ನೋಟ:

* ಸಾಹಿತ್ಯ: ಶಿವಮೊಗ್ಗದ ರಾಜೇಂದ್ರ ಚೆನ್ನಿ, ತುಮಕೂರಿನ ತುಂಬಾಡಿ ರಾಮಯ್ಯ ಮತ್ತು ಡಾ. ಎಚ್.ಎಲ್. ಪುಷ್ಪ, ಚಿಕ್ಕಬಳ್ಳಾಪುರದ ಪ್ರೊ. ಆರ್. ಸುನಂದಮ್ಮ, ಚಿಕ್ಕಮಗಳೂರಿನ ರಹಮತ್ ತರೀಕೆರೆ ಮತ್ತು ವಿಜಯಪುರದ ಹ.ಮ.ಪೂಜಾರ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
* ಚಲನಚಿತ್ರ ಮತ್ತು ಕಿರುತೆರೆ: ದಕ್ಷಿಣ ಕನ್ನಡದ ಪ್ರಕಾಶ್ ರಾಜ್, ಕೊಡಗಿನ ವಿಜಯಲಕ್ಷ್ಮಿ ಸಿಂಗ್.
* ಸಮಾಜಸೇವೆ: ವಿಜಯನಗರದ ಸೂಲಗಿತ್ತಿ ಈರಮ್ಮ, ಬೆಂಗಳೂರು ಗ್ರಾಮಾಂತರದ ಫಕ್ಕೀರಿ, ದಕ್ಷಿಣ ಕನ್ನಡದ ಕೋರಿನ್ ಆಂಟೊನಿಯಟ್ ರನಾ, ಉಡುಪಿಯ ಡಾ.ಎನ್.ಸೀತಾರಾಮ ಶೆಟ್ಟಿ ಮತ್ತು ಶಿವಮೊಗ್ಗದ ಕೋಣಂದೂರು ಲಿಂಗಪ್ಪ.
* ವೈದ್ಯಕೀಯ: ತುಮಕೂರಿನ ಡಾ. ಆಲಮ್ಮ ಮಾರಣ್ಯ ಮತ್ತು ಬೆಂಗಳೂರು ಗ್ರಾಮಾಂತರದ ಡಾ.ಜಯರಂಗನಾಥ್.
* ಕೃಷಿ: ಹಾವೇರಿ ಡಾ.ಎಸ್.ವಿ. ಹಿತ್ತಲಮನಿ ಮತ್ತು ಹಾಸನದ ಎಂ.ಸಿ. ರಂಗಸ್ವಾಮಿ.
* ಮಾಧ್ಯಮ: ಬೆಂಗಳೂರಿನ ಕೆ. ಸುಬ್ರಮಣ್ಯ, ಮೈಸೂರಿನ ಅಂಶಿ ಪ್ರಸನ್ನ ಕುಮಾರ್, ದಕ್ಷಿಣ ಕನ್ನಡದ ಬಿ.ಎಂ. ಹನೀಫ್ ಮತ್ತು ಮಂಡ್ಯ ಜಿಲ್ಲೆಯ ಎಂ.ಸಿದ್ದರಾಜು.
* ಕ್ರೀಡೆ: ಬೆಂಗಳೂರಿನ ಆಶೀಶ್ ಕುಮಾರ್ ಬಲ್ಲಾಳ್, ಮೈಸೂರಿನ ಎಂ.ಯೋಗೇಂದ್ರ ಮತ್ತು ಕೊಡಗಿನ ಡಾ. ಬಬಿನಾ ಎನ್. ಎಂ. (ಯೋಗ).
* ನ್ಯಾಯಾಂಗ: ಬಾಗಲಕೋಟೆಯ ನ್ಯಾ. ಪಿ.ಬಿ. ಭಜಂತ್ರಿ (ಪವನ್ ಕುಮಾರ್ ಭಜಂತ್ರಿ).
ಈ ಬಾರಿಯ ಪ್ರಶಸ್ತಿ ವಿತರಣೆಯಲ್ಲಿ, ಯಕ್ಷಗಾನ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಜಾನಪದ, ಸಂಗೀತ, ನೃತ್ಯ, ಸಂಕೀರ್ಣ, ಹೊರನಾಡು/ಹೊರದೇಶ ಹಾಗೂ ವಿಜ್ಞಾನ/ತಂತ್ರಜ್ಞಾನ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಮಾನ್ಯತೆ ನೀಡಲಾಗಿದೆ. ಗಣನೀಯ ಸಾಧನೆ ಮಾಡಿದ ಎಲ್ಲಾ 70 ಪ್ರಶಸ್ತಿ ಪುರಸ್ಕೃತರಿಗೆ ರಾಜ್ಯ ಸರ್ಕಾರವು ನವೆಂಬರ್ 1 ರಂದು ನಡೆಯುವ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ.






















