ಬೆಂಗಳೂರು, ಅ.29. www.bengaluruwire.com : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನಿರ್ದೇಶಕರು (MD) ಅವರು ಇತ್ತೀಚೆಗೆ ಕರ್ನೂಲಿನಲ್ಲಿ ಖಾಸಗಿ ವೋಲ್ವೋ ಬಸ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ, ಬಸ್ ಪ್ರಯಾಣಿಕರ ಸುರಕ್ಷತೆಗಾಗಿ ನಿಗಮವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಹಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಬಸ್‌ಗಳಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡಗಳು ಸಂಭವಿಸಿದಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಎಲ್ಲಾ ಸಿಬ್ಬಂದಿಗಳಿಗೆ ಹೆಚ್ಚು ತರಬೇತಿ ನೀಡಲು ಸೂಚಿಸಿದ್ದಾರೆ.
ಈ ಕುರಿತು ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಯಿಂದ ನಿತ್ಯ ಬೆಳಿಗ್ಗೆ, ಸಂಜೆ ವಿಶೇಷ ಕಾರ್ಯಾಗಾರಗಳನ್ನು ನಡೆಸುವಂತೆ ಆದೇಶಿಸಲಾಗಿದೆ. ಕೆಎಸ್ ಆರ್ ಟಿಸಿ ಎಂಡಿ ಪತ್ರ ಬರೆಯಲು ಮುಖ್ಯ ಕಾರಣ ಸಾರಿಗೆ ಸಚಿವರ ಅ.28 ರ ಪತ್ರ.
“ಇತ್ತೀಚಿಗೆ ಕರ್ನೂಲ್ ಬಸ್ ದುರಂತ ತೀವು ದುಃಖಕರವಾದ ಸಂಗತಿ. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿರುವ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲನ ನಡೆಸಬೇಕು. ಬಸ್ಸುಗಳಲ್ಲಿ ಯಾವುದೇ ವಾಣಿಜ್ಯ ಸರಕು/ ಲಗೇಜ್ ಸಾಗಿಸುವ ಸಂದರ್ಭದಲ್ಲಿ ಬೆಂಕಿಗೆ ಬೇಗ ಉರಿಯುವ ಅಥವಾ ಇತರ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ನಿಗಾವಹಿಸಬೇಕು. ಹಾಗೂ ಒಟ್ಟಾರೆ ಸುರಕ್ಷತಾ ಪರಿಶೀಲನೆ ನಡೆಸಬೇಕು” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅ.28ರಂದು ಕೆಎಸ್ ಆರ್ ಟಿಸಿ ಸೇರಿದಂತೆ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.


“ಎಲ್ಲಾ ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯಲು ಸುತ್ತಿಗೆಗಳು ಕಡ್ಡಾಯವಾಗಿರಬೇಕು. ಲಗೇಜ್ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು. ಬಸ್ಸುಗಳ ನವೀಕರಣ ಬಗ್ಗೆ ಪರಿಶೀಲನೆ ನಡೆಸಬೇಕು.
ಈ ಮೇಲಿನ ಯಾವುದೇ ನೂನ್ಯತೆ ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು”.
“ಪ್ರಯಾಣಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ. ಪ್ರಾಣ ಹಾನಿಗೆ ಯಾವುದೇ ರೀತಿಯಿಂದಲೂ ನಮ್ಮ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಕೂಡಲೇ ಬಸ್ಸುಗಳಲ್ಲಿನ ಸುರಕ್ಷತಾ ಆಡಿಟ್ ಪರಿಶೀಲನೆಗೆ ತಂಡಗಳನ್ನು ರಚಿಸಿ, ಸೂಕ್ತ ಕ್ರಮಕೈಗೊಳ್ಳಬೇಕಿದೆ” ಎಂದು ಸಾರಿಗೆ ಸಚಿವರು ಪತ್ರದಲ್ಲಿ ತಿಳಿಸಿದ್ದರು.
ಪ್ರಮುಖ ಸೂಚನೆಗಳು ಮತ್ತು ಸುರಕ್ಷತಾ ಕ್ರಮಗಳು:
ಅಗ್ನಿಶಾಮಕ ಕಡ್ಡಾಯ: ಎಲ್ಲಾ ಪ್ರತಿಷ್ಠಿತ ರಾತ್ರಿ ಸಾರಿಗೆ ವಾಹನಗಳಲ್ಲಿ 5 ಲೀಟರ್‌ನ 2 ಅಗ್ನಿನಂದಕಗಳು ಇರಬೇಕು. ಇತರೆ ವಾಹನಗಳಲ್ಲಿಯೂ ಅವಶ್ಯ ಅಗ್ನಿ ನಂದಕಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ತಾಂತ್ರಿಕ ಪರಿಶೀಲನೆ: ಎಲ್ಲಾ ಬಸ್‌ಗಳಲ್ಲಿ Fire Detection & Suppression System (FDSS), Fire Alarm & Protection System (FAPS), ಮತ್ತು Fire Detection & Alarm System (FDAS) ಸದಾ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು.
ವಿದ್ಯುತ್ ವ್ಯವಸ್ಥೆ ಪರಿಶೀಲನೆ: ಪ್ರತಿನಿತ್ಯ ಎಲೆಕ್ಟ್ರಿಕ್ ವೈರ್‌ಗಳು ಸುಸ್ಥಿತಿಯಲ್ಲಿರುವ ಕುರಿತು ಪರಿಶೀಲಿಸುವುದು ಕಡ್ಡಾಯ. ಬ್ಯಾಟರಿ ಕಟ್‌ಆಫ್ ಸ್ವಿಚ್‌ಗಳನ್ನು ದುರಸ್ತಿಪಡಿಸಿ, ವಿದ್ಯುತ್ ವೈರುಗಳ ಸವೆತ ತಪ್ಪಿಸಲು ಕ್ರಮ ವಹಿಸಬೇಕು.
ತುರ್ತು ನಿರ್ಗಮನ: ಎಲ್ಲಾ ಎಸಿ ವಾಹನಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕಿಟಕಿ ಗ್ಲಾಸ್‌ಗಳನ್ನು ಒಡೆಯಲು ಹ್ಯಾಮರ್‌ಗಳು ಇರುವುದನ್ನು ಖಾತರಿಪಡಿಸಬೇಕು. ಎಲ್ಲಾ ತುರ್ತು ಬಾಗಿಲುಗಳು ಸುಸ್ಥಿತಿಯಲ್ಲಿರುವುದನ್ನು ಪರಿಶೀಲಿಸಬೇಕು.
ನಿಷೇಧಿತ ವಸ್ತು ಸಾಗಣೆ: ಬೆಂಕಿ ಆಕರ್ಷಿಸುವ ವಸ್ತುಗಳನ್ನು ಸಾಗಿಸದಂತೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ತಿಳುವಳಿಕೆ ನೀಡಬೇಕು. ಬಸ್ ನಿಲ್ದಾಣಗಳಲ್ಲಿಯೂ ಆಡಿಯೋ/ವಿಡಿಯೋ ಮೂಲಕ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡಲು ತಿಳಿಸಲಾಗಿದೆ.
ಟಿಕೆಟ್‌ನಲ್ಲಿ ಮುದ್ರಣ: ಟಿಕೆಟ್/ರಿಸರ್ವೇಷನ್ ಟಿಕೆಟ್‌ಗಳ ಮೇಲೆ ಅಗ್ನಿಯನ್ನು ಆಕರ್ಷಿಸಿಸುವ ವಸ್ತುಗಳ ಸಾಗಣಿಕೆಯನ್ನು ನಿಷೇಧಿಸಲಾಗಿದೆ ಎಂಬ ಸಂದೇಶ ಮತ್ತು ತುರ್ತು ಕ್ರಮಗಳ ಬಗ್ಗೆ ಚಿತ್ರಾತ್ಮಕ ಮಾಹಿತಿಯನ್ನು ಮುದ್ರಿಸಲು ಕ್ರಮ ವಹಿಸಬೇಕು ಎಂದು ತಿಳಿಸಲಾಗಿದೆ.
ಈ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿರುವ ಬಗ್ಗೆ ಎಲ್ಲಾ ವಿಭಾಗಗಳ ಹಿರಿಯ/ವಿಭಾಗೀಯ ನಿಯಂತ್ರಣಾಧಿಕಾರಿಗಳು ನವೆಂಬರ್ 10ರೊಳಗೆ ಅನುಸರಣಾ ವರದಿಯನ್ನು ತಪ್ಪದೆ ಸಲ್ಲಿಸಬೇಕು ಎಂದು ಎಂಡಿ ಆದೇಶಿಸಿದ್ದಾರೆ.






















