ಬೆಂಗಳೂರು, ಅ.29 www.bengaluruwire.com : ಕೇಂದ್ರ ಸರ್ಕಾರದ ಸಂಸ್ಥೆಗಳು ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡದಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕಅಪ್ರಾ) ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಸಂಸ್ಥೆಯು ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನಿರಾಕರಿಸಿರುವುದು ಖಂಡನಾರ್ಹ. ಸಂಸ್ಥೆಯ ಆಡಳಿತ ವರ್ಗದ ಈ ಧೋರಣೆಯನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಲಿದೆ ಎಂದು ಬಿಳಿಮಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಎಚ್ ಇಎಲ್ ಗೆ ಕಅಪ್ರಾ ಪತ್ರ:

ಈ ಕುರಿತು ಬಿಎಚ್ ಇಎಲ್ ನ ಉನ್ನತ ಅಧಿಕಾರಿಗಳಿಗೆ ಕಅಪ್ರಾ ಅಧ್ಯಕ್ಷರು ಪತ್ರ ಬರೆದಿದ್ದಾರೆ. “ನೌಕರರ ಸಂಘಟನೆಗಳಿಗೆ ಯಾವುದೇ ಷರತ್ತು ವಿಧಿಸದೆ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಬೇಕು. ಇದು ನೆಲದ ಭಾಷೆಗೆ ಗೌರವ ಕೊಡುವ ವಿಷಯ. ಕೂಡಲೇ ಅನುಮತಿ ನೀಡಲು ನಿರಾಕರಿಸಿದಲ್ಲಿ, ರಾಜ್ಯ ಸರ್ಕಾರವು ತನ್ನ ಅಧಿಕಾರ ವ್ಯಾಪ್ತಿಯನ್ನು ಸಂಸ್ಥೆಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ” ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.
ನವೆಂಬರ್ 1 ರಂದು ಯಾವುದೇ ಸಂಸ್ಥೆ ರಾಜ್ಯೋತ್ಸವ ಆಚರಣೆಗೆ ಅನುಮತಿ ನಿರಾಕರಿಸಿದರೆ, ತಾವೇ ಖುದ್ದಾಗಿ ಭೇಟಿ ನೀಡಿ ಕ್ರಮಕ್ಕೆ ಆಗ್ರಹಿಸುವುದಾಗಿ ಅವರು ತಿಳಿಸಿದ್ದಾರೆ.
ಬಿಎಚ್ ಇಎಲ್ ಗೆ ನಿಯೋಗ ಭೇಟಿ:
ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆಗಾಗಿ ಕಅಪ್ರಾ ನಿಯೋಗವು ಶೀಘ್ರದಲ್ಲಿಯೇ ಬಿಎಚ್ ಇಎಲ್ ಗೆ ಭೇಟಿ ನೀಡಲಿದೆ. ನ್ಯೂನತೆಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. “ಕರ್ನಾಟಕದ ನೆಲ-ಜಲ, ಸಂಪನ್ಮೂಲ ಬಳಸುವ ಕೇಂದ್ರೋದ್ಯಮಗಳು ಮೊದಲು ಇಲ್ಲಿನ ಭಾಷೆಗೆ ಗೌರವ ಕೊಡಬೇಕು. ಒಕ್ಕೂಟ ತತ್ವವನ್ನು ಗೌರವಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ರಾಜ್ಯ ಸರ್ಕಾರವು ಆಗ್ರಹಿಸುವುದು ಅನಿವಾರ್ಯ” ಎಂದು ಬಿಳಿಮಲೆ ಖಡಾಖಂಡಿತವಾಗಿ ಹೇಳಿದ್ದಾರೆ.
ಮಹಾಲೇಖಪಾಲರ ಕಚೇರಿಗೂ ಎಚ್ಚರಿಕೆ:
ಬೆಂಗಳೂರಿನ ಮಹಾಲೇಖಪಾಲರ (AG) ಕಚೇರಿಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕಿದೆ. ಈ ಕುರಿತು ಪ್ರಧಾನ ಮಹಾಲೇಖಪಾಲ ಶ್ರೀ ರಾಜೀವ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಅನ್ಯ ಭಾಷಿಕ ಸಿಬ್ಬಂದಿ ಸ್ಥಳೀಯ ನೌಕರರೊಂದಿಗೆ ಕನ್ನಡ ಬಳಸಬೇಕು. ಹಿಂದಿನ ಭೇಟಿಯ ನಂತರವೂ ರಚನಾತ್ಮಕ ಬದಲಾವಣೆ ಕಾಣದಿರುವುದು ವಿಷಾದನೀಯ ಎಂದಿದ್ದಾರೆ.
ಎಜಿ ಕಚೇರಿಯಲ್ಲಿ ಕೂಡಲೇ ಕನ್ನಡ ಕಲಿಕಾ ಘಟಕ ತೆರೆಯಲು, ಜಾಲತಾಣಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಲು ಮತ್ತು ದೈನಂದಿನ ಪತ್ರಗಳಲ್ಲಿ ಕನ್ನಡ ಬಳಸಲು ಆಗ್ರಹಿಸಿದ್ದಾರೆ. ಮಹಾಲೇಖಪಾಲರ ಕಚೇರಿಯು ಕಡ್ಡಾಯವಾಗಿ ತ್ರಿಭಾಷಾ ಸೂತ್ರವನ್ನು ಅನುಸರಿಸಬೇಕು ಎಂದು ಬಿಳಿಮಲೆ ಒತ್ತಾಯಿಸಿದ್ದಾರೆ.






















