ಬೆಂಗಳೂರು, ಅ.29. www.bengaluruwire.com : ರಾಜಧಾನಿ ಬೆಂಗಳೂರಿನ ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಮಾರು ₹ 51.40 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ನಗದನ್ನು ಕಳವು ಮಾಡಿದ್ದ ಮನೆಯ ಹಳೆಯ ಕೆಲಸದಾಕೆಯನ್ನು ಬಂಧಿಸಿ, ಸಂಪೂರ್ಣ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ ಮತ್ತು ಕಳ್ಳತನದ ಶೈಲಿ ಹೇಗಿತ್ತು?:
ಜೆ.ಪಿ. ನಗರದ 2ನೇ ಹಂತದಲ್ಲಿ ವಾಸವಿರುವ ದೂರುದಾರರು ಅ.11 ರಂದು ಜೆ.ಪಿ. ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಸಂಬಂಧಿಕರ ಮನೆಯಲ್ಲಿ ಪೂಜೆ ಇದ್ದ ಕಾರಣ ಆಭರಣ ಧರಿಸಲು ಕೊಠಡಿಯ ಬೀರು ತೆರೆದಾಗ, ಅದರಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ₹1 ಲಕ್ಷ ನಗದು ಕಳುವಾಗಿರುವುದು ಬೆಳಕಿಗೆ ಬಂದಿದೆ.

ದೂರುದಾರರು ಬೀರುವಿನ ಕೀಯನ್ನು ಅದರ ಮೇಲೆಯೇ ಇಟ್ಟಿದ್ದು, ಮನೆಯಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಹಿಳೆಯು, ಕಳ್ಳತನ ನಡೆಯುವ 20 ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಗೆಲಸದಾಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ಬಗ್ಗೆ ಜೆ.ಪಿ. ನಗರ ಪೊಲೀಸ್ ಠಾಣೆಯಲ್ಲಿ ಸೇವಕಿಯಿಂದ ಕಳವು ಪ್ರಕರಣ (Theft by Servant) ದಾಖಲಾಗಿತ್ತು.
ಪೊಲೀಸರ ಕಾರ್ಯಾಚರಣೆ ಮತ್ತು ಬಂಧನ :
ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು, ಬಾತ್ಮೀದಾರರಿಂದ ಪಡೆದ ಖಚಿತ ಮಾಹಿತಿಯ ಮೇರೆಗೆ ಅ.11 ರಂದು ಆರೋಪಿ ಮಹಿಳೆಯನ್ನು ಪುಟ್ಟೇನಹಳ್ಳಿಯ ಕಾಲೇಜು ಬಳಿಯ ಅಕ್ಕನ ವಾಸದ ಮನೆಯ ಬಳಿ ವಶಕ್ಕೆ ಪಡೆದಿದ್ದಾರೆ.
ಪೊಲೀಸರ ವಿಚಾರಣೆ ವೇಳೆ, ಮಹಿಳೆಯು ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ನಗದನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕಳವು ಮಾಡಿದ ಆಭರಣಗಳನ್ನು ಜಯನಗರದಲ್ಲಿರುವ 2 ಜ್ಯುವೆಲರಿ ಅಂಗಡಿಗಳಲ್ಲಿ ಮತ್ತು ರಾಮೂರ್ತಿನಗರದಲ್ಲಿರುವ 1 ಜ್ಯುವೆಲರಿ ಅಂಗಡಿಯಲ್ಲಿ ಅಡಮಾನ (Pledge) ಇಟ್ಟಿರುವುದಾಗಿ ತಿಳಿಸಿದ್ದಾಳೆ.
ಆರೋಪಿಯ ನೀಡಿದ ಮಾಹಿತಿಯ ಮೇರೆಗೆ, ಅಕ್ಟೋಬರ್ 12ರ ಅವಧಿಯಲ್ಲಿ ಒಟ್ಟು 458 ಗ್ರಾಂ ಚಿನ್ನಾಭರಣ ಮತ್ತು 3.868 ಕೆ.ಜಿ.ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹ 51,40,000ಆಗಿದೆ. ಅ.11 ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ತನಿಖೆ ಮುಗಿದ ಬಳಿಕ, ಅ.18ರಂದು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ (Judicial Custody) ಒಳಪಡಿಸಿದೆ.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲೋಕೇಶ್.ಬಿ ಜಗಲಾಸರ್ ಮಾರ್ಗದರ್ಶನದಲ್ಲಿ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. (Representational image credit : Gemini)






















