ನವದೆಹಲಿ, ಅ.24 www.bengaluruwire.com : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ 2047’ ಸಂಕಲ್ಪದ ಭಾಗವಾಗಿ, ಭಾರತವು 2035ರ ವೇಳೆಗೆ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು (Space Station) ಹೊಂದುವ ಮಹತ್ವಕಾಂಕ್ಷಿ ಗುರಿಯನ್ನು ಹೊಂದಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣ ಅವರು ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ದೇಶದ ವೈಜ್ಞಾನಿಕ ಪ್ರಗತಿಯನ್ನು ಎತ್ತಿಹಿಡಿಯುವ ‘ಎಮರ್ಜಿಂಗ್ ಸೈನ್ಸ್, ಟೆಕ್ನಲಾಜಿ & ಇನ್ನೋವೆಷನ್ ಕಾಂಕ್ಲೇವ್’ (ESTIC – 2025) ಕುರಿತು ಮಾಹಿತಿ ನೀಡಿದರು. ಈ ಸಮ್ಮೇಳನವನ್ನು ಇದೇ ನವೆಂಬರ್ 3 ರಿಂದ 5ರ ವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ.

ದುಪ್ಪಟ್ಟಾಗಲಿವೆ ಉಪಗ್ರಹಗಳು:
ಬಾಹ್ಯಾಕಾಶ ಕ್ಷೇತ್ರದಲ್ಲಿನ ಪ್ರಗತಿಯ ಕುರಿತು ಮಾತನಾಡಿದ ಡಾ. ನಾರಾಯಣ ಅವರು, ಭಾರತದ ಉಪಗ್ರಹಗಳ ಸಂಖ್ಯೆ ಮುಂದಿನ 3-4 ವರ್ಷಗಳಲ್ಲಿ ದುಪ್ಪಟ್ಟುಗೊಳ್ಳುವ ನಿರೀಕ್ಷೆಯಿದೆ. ಈ ಹೆಚ್ಚಳದಿಂದಾಗಿ ಹವಾಮಾನ ಮುನ್ಸೂಚನೆ, ರಕ್ಷಣೆ ಮತ್ತು ಕೃಷಿ ಸೇರಿದಂತೆ ದೇಶದ ಬಹುಮುಖ್ಯ ವಲಯಗಳಿಗೆ ಮತ್ತಷ್ಟು ನಿಖರವಾದ ಮಾಹಿತಿ ಲಭ್ಯವಾಗಲಿದೆ. ಇದು ದೇಶದ ನಾಗರಿಕರಿಗೆ ನೇರವಾಗಿ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.

ಬಾಹ್ಯಾಕಾಶ ನವೋದ್ಯಮಗಳಿಗೆ ಹೊಸ ಉತ್ತೇಜನ:
ಕೇಂದ್ರ ಸರ್ಕಾರದ ದೂರದೃಷ್ಟಿಯ ನೀತಿ, ನಿರೂಪಣೆಯು ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. 2020ರ ಬಾಹ್ಯಾಕಾಶ ನೀತಿಯನ್ನು ಜಾರಿಗೆ ತರುವ ಮೊದಲು, ಈ ಕ್ಷೇತ್ರದಲ್ಲಿ ಕೇವಲ ಬೆರಳೆಣಿಕೆಯಷ್ಟು ನವೋದ್ಯಮಗಳಿದ್ದವು. ಆದರೆ, ಈಗ ಅವುಗಳ ಸಂಖ್ಯೆ 300ಕ್ಕೂ ಹೆಚ್ಚು ತಲುಪಿದೆ. ಪ್ರಸ್ತುತ 500ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಇಸ್ರೋದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದು ದೇಶದ ನವೀನ ಆವಿಷ್ಕಾರ ಮತ್ತು ತಾಂತ್ರಿಕ ಪ್ರಗತಿಗೆ ಹೊಸ ದಿಕ್ಕನ್ನು ನೀಡಿದೆ ಎಂದರು.
ಇಎಸ್ ಟಿಐಸಿ-2025 ಸಮ್ಮೇಳನದಲ್ಲಿ ಕ್ವಾಂಟಮ್ ತಂತ್ರಜ್ಞಾನ, ಗಗನಯಾನ ಮತ್ತು ನವೋದ್ಯಮಗಳ ಆವಿಷ್ಕಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ಅವರು ತಿಳಿಸಿದರು. (ಗ್ರಾಫಿಕ್ಸ್ ಚಿತ್ರದ ಕೃಪೆ : ಮೆಟಾ ಎಐ)























