ಬೆಂಗಳೂರು, ಅ.23 www.bengaluruwire.com : ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ವಾಸಿಸುವ ನಾಗರಿಕರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಒಂದು ಮಹತ್ವದ ಮತ್ತು ನೆಮ್ಮದಿಯ ಸುದ್ದಿ ನೀಡಿದೆ.
ಅಕ್ಟೋಬರ್ 16ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಪಡೆದಿರುವ 1,200 ಚದರ ಅಡಿ (30×40 ಅಡಿ ಅಳತೆಯ ನಿವೇಶನಗಳು ಸೇರಿದಂತೆ) ವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾದ ನೆಲ + 2 ಅಂತಸ್ತು ಅಥವಾ ಸ್ಟಿಲ್ಟ್ + 3 ಅಂತಸ್ತಿನವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (Occupancy Certificate – OC) ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಈ ನಿರ್ಧಾರದಿಂದಾಗಿ ಹಲವು ತಿಂಗಳಿಂದ ಬಾಕಿಯಿದ್ದ ಸಾವಿರಾರು ವಿದ್ಯುತ್ ಸಂಪರ್ಕ ಅರ್ಜಿಗಳು ಇತ್ಯರ್ಥಗೊಳ್ಳಲಿವೆ.
ಈ ಮಹತ್ವದ ಬದಲಾವಣೆಯು ಅಕ್ಟೋಬರ್ 9ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಿರ್ಣಯ (ಪ್ರಕರಣ ಸಂಖ್ಯೆ: ಸಿ.857/2025) ಮತ್ತು ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಕಲಂ 241(7)ರ ಅಡಿಯಲ್ಲಿ ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಜಾರಿಗೆ ಬಂದಿದೆ. ಈ ಕಾನೂನಿನ ಅಡಿ, ನಿಗದಿತ ಮಾನದಂಡದೊಳಗೆ ಬರುವ ಒಸಿ ಗಳಿಲ್ಲದ ಕಟ್ಟಡಗಳು ಸಹ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಅನುವು ಮಾಡಿಕೊಟ್ಟಿದೆ.
ಸಾವಿರಾರು ಅರ್ಜಿಗಳಿಗೆ ಮುಕ್ತಿ :

ಬೆಸ್ಕಾಂನ ಕಾರ್ಯಾಚರಣೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಮಾಲತೇಶ್ ಅವರು ಈ ನಿರ್ಧಾರವನ್ನು ದೃಢಪಡಿಸಿದ್ದಾರೆ. “ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 1,200 ಚದರ ಅಡಿವರೆಗಿನ ಕಟ್ಟಡಗಳಿಗೆ ನೆಲ + 2 ಅಂತಸ್ತು ಅಥವಾ ಸ್ಟಿಲ್ಟ್ + 3 ಅಂತಸ್ತಿನವರೆಗಿನ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (OC) ಪಡೆಯುವುದರಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಅಕ್ಟೋಬರ್ 16ರಿಂದ ಬೆಸ್ಕಾಂನ ಜಿಬಿಎ ವ್ಯಾಪ್ತಿಯಲ್ಲಿ ಈ ನಿಯಮ ಜಾರಿಗೆ ಬಂದಿದೆ” ಎಂದು ಅವರು ತಿಳಿಸಿದ್ದಾರೆ.
“ಅಕ್ಟೋಬರ್ 15ರವರೆಗೆ ಜಿಬಿಎ ವ್ಯಾಪ್ತಿಯಲ್ಲಿ ಅಂದಾಜು 50,000 ಹೊಸ ವಿದ್ಯುತ್ ಸಂಪರ್ಕ ಅರ್ಜಿಗಳು ಬಾಕಿ ಉಳಿದಿವೆ. 30×40 ಚದರ ಅಡಿ ಅಳತೆಯ ವಿಸ್ತೀರ್ಣದ ನಿವೇಶನಗಳಲ್ಲಿ ಕಟ್ಟುವ ಕಟ್ಟಡಗಳ ಮಾಲೀಕರ ಅರ್ಜಿಗಳನ್ನು ಪ್ರತ್ಯೇಕಿಸಿರದಿದ್ದರೂ, ಬಾಕಿ ಇರುವ ಅರ್ಜಿಗಳಲ್ಲಿ ಸುಮಾರು ಶೇ.70ರಷ್ಟು ಗ್ರಾಹಕರು ಸರ್ಕಾರದ ಈ ನೂತನ ನಿರ್ಧಾರದಿಂದ ಪ್ರಯೋಜನ ಪಡೆಯುವ ಸಾಧ್ಯತೆ ಇದೆ” ಎಂದು ಅವರು ಹೇಳಿದ್ದಾರೆ.
ಹಿನ್ನೆಲೆ ಮತ್ತು ಸಾರ್ವಜನಿಕರ ಸಮಸ್ಯೆ :
ಈ ಹಿಂದೆ, ಏಪ್ರಿಲ್ 4ರಿಂದ ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಾರಂಭಿಕ ಪ್ರಮಾಣಪತ್ರ (CC) ಹಾಗೂ ಕಟ್ಟಡ ಪೂರ್ಣಗೊಳಿಸಿದ ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರ (OC) ಇಲ್ಲದೆ ವಿದ್ಯುತ್ ಸಂಪರ್ಕ ನೀಡದಂತೆ ಬೆಸ್ಕಾಂ ಸುತ್ತೋಲೆ ಹೊರಡಿಸಿತ್ತು. ಇದರಿಂದಾಗಿ ಸಣ್ಣ ಕಟ್ಟಡಗಳ ಮಾಲೀಕರಿಗೆ ತೀವ್ರ ತೊಂದರೆಯಾಗಿತ್ತು ಮತ್ತು ಸಾವಿರಾರು ಅರ್ಜಿಗಳು ಬಾಕಿ ಉಳಿದಿದ್ದವು.
ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, 2025ರ ಏಪ್ರಿಲ್ 4ರ ಮುಂಚೆಯೇ ಕಟ್ಟಡ ಕಟ್ಟಿ, ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಬೆಸ್ಕಾಂಗೆ ಶುಲ್ಕ ಕಟ್ಟಿ, ಕಾರ್ಯಾದೇಶ ಮತ್ತು ಮೀಟರ್ ಪಡೆದಿದ್ದರೂ ಸಹ ಸುಮಾರು 1,73,000 ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ. ಹಾಗೆಯೇ, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ಪೂರ್ಣಿಗೊಳಿಸಿ ಶಾಶ್ವತ ಸಂಪರ್ಕಕ್ಕಾಗಿ ಕಾಯುತ್ತಿದ್ದ ಅಂದಾಜು 2 ಲಕ್ಷ ಕಟ್ಟಡ ಮಾಲೀಕರು ಎಲ್ಲಾ ವಿಸ್ತೀರ್ಣದ ನಿವೇಶನಗಳಲ್ಲಿ ಇದ್ದರು. ಬೆಸ್ಕಾಂನ ಹಿಂದಿನ ಸುತ್ತೋಲೆಯ ನಂತರ ಮಂಜೂರಾತಿ ನಕ್ಷೆಯಿದ್ದಲ್ಲಿ ಮಾತ್ರ ತಾತ್ಕಾಲಿಕ ವಿದ್ಯುತ್ ಸರಬರಾಜು ನೀಡಲಾಗುತ್ತಿತ್ತು. ಮತ್ತು ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಒಸಿ, ಸಿಸಿ ಕಡ್ಡಾಯಗೊಳಿಸಿದ್ದರಿಂದ ಅದು ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನುಕೂಲವಾಗುತ್ತಿತ್ತು ಎಂದು ಅವರು ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.
ಸರ್ಕಾರದ ಈ ಹೊಸ ಆದೇಶವು ಸಣ್ಣ ಮತ್ತು ಮಧ್ಯಮ ವರ್ಗದ ವಸತಿ ಕಟ್ಟಡಗಳ ಮಾಲೀಕರಿಗೆ ಬಹುದೊಡ್ಡ ನಿರಾಳತೆ ತಂದಿದ್ದು, ಬೆಂಗಳೂರಿನಲ್ಲಿ ವಿದ್ಯುತ್ ಸಂಪರ್ಕ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದಂತಾಗಿದೆ.

























