ಬೆಂಗಳೂರು, ಅ.20 www.bengaluruwire.com : ವಿವಿಧ ರೀತಿಯ ಕರ್ತವ್ಯಗಳ ನಿರತ ಅವಧಿಯಲ್ಲಿ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ನಾಳೆ (ಅ.21) ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
ರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಾಗ ಹಾಗೂ ಗಡಿ ರಕ್ಷಣೆ ಸೇರಿದಂತೆ ವಿವಿಧ ರೀತಿಯ ಕರ್ತವ್ಯಗಳ ನಿರತ ಅವಧಿಯಲ್ಲಿ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಅ.21ರಂದು ದೇಶಾದ್ಯಂತ ‘ಪೊಲೀಸ್ ಸಂಸ್ಮರಣಾ ದಿನಾಚರಣೆ’ಯನ್ನು ಆಚರಿಸಲಾಗುತ್ತದೆ.
ಬೆಳಿಗ್ಗೆ 8 ಗಂಟೆಗೆ ಮೈಸೂರು ರಸ್ತೆ ಸಿ.ಎ.ಆರ್ ಕೇಂದ್ರ ಸ್ಥಾನದಲ್ಲಿ ಈ ಪೊಲೀಸ್ ಸಂಸ್ಮರಣ ದಿನಾಚರಣೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹುತಾತ್ಮರ ತ್ಯಾಗವನ್ನು ಸ್ಮರಿಸಲಿದ್ದಾರೆ. ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜ್ಯದ ಪೊಲೀಸ್ ಮುಖ್ಯಸ್ಥರು, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳು, ಮತ್ತು ಕೇಂದ್ರ ಪೊಲೀಸ್ ಘಟಕಗಳ ಮುಖ್ಯಸ್ಥರು ಸೇರಿದಂತೆ ವಿವಿಧ ದರ್ಜೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಗೌರವವನ್ನು ಸಮರ್ಪಿಸಲಿದ್ದಾರೆ.

ರಾಜ್ಯದ 8 ಪೊಲೀಸರಿಗೆ ಶ್ರದ್ಧಾಂಜಲಿ :
ಲಭ್ಯ ಮಾಹಿತಿಯ ಪ್ರಕಾರ, 2024ರ ಸೆಪ್ಟೆಂಬರ್ 02 ರಿಂದ 2025ನೇ ಆಗಸ್ಟ್ 31 ರ ನಡುವಿನ ಅವಧಿಯಲ್ಲಿ ಭಾರತಾದ್ಯಂತ ಕರ್ತವ್ಯ ನಿರ್ವಹಣೆಯ ವೇಳೆ ಒಟ್ಟು 191 ವಿವಿಧ ದರ್ಜೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಇವರಲ್ಲಿ ಕರ್ನಾಟಕ ರಾಜ್ಯದ ಒಟ್ಟು 08 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿದ್ದಾರೆ.
ರಾಜ್ಯದ ಹುತಾತ್ಮರಾದ ಪೊಲೀಸರು :
* ಪಿ.ಎಸ್.ಐ ಮೆಬೂಬು ಗುಡ್ಡಲಿಲ್ (ಬೆಂಗಳೂರು ನಗರ ತಲಘಟ್ಟಪುರ ಪೊಲೀಸ್ ಠಾಣೆ)
* ಎ.ಎಸ್.ಐ ವೆಂಕಟಾಚಲಪತಿ (ಕೆಜಿಎಫ್‌ನ ಬಿಇಎಂಎಲ್ ನಗರ ಪೊಲೀಸ್ ಠಾಣೆ)
* ಎ.ಆರ್.ಎಸ್.ಐ ಗಿರೀಶ್.ಎಸ್ (ತುಮಕೂರು ಜಿಲ್ಲೆಯ ಡಿ.ಎ.ಆರ್.)
* ಸಿ.ಹೆಚ್.ಸಿ ಬಸವರಾಜ ಎಂ (ಬೆಂಗಳೂರು ಜಿಲ್ಲೆಯ ದಾಬಸ್‌ಪೇಟೆ ಪೊಲೀಸ್ ಠಾಣೆ)
* ಎ.ಹೆಚ್.ಸಿ ನಿಂಗರಾಜ್ ಟಿ.ಎಸ್ (ತುಮಕೂರು ಜಿಲ್ಲೆಯ ಡಿಎಆರ್)
* ಸ್ಪೆ ಆರ್.ಹೆಚ್.ಸಿ ಪ್ರಕಾಶ್.ಬಿ.ಯು (ಹಾಸನ ಕೆ.ಎಸ್.ಆರ್.ಪಿ. 11 ನೇ ಪಡೆ)
* ಹೆಚ್.ಸಿ. ಮಹೇಶ್.ಎನ್.ಆರ್ (ಬೆಂಗಳೂರು ನಗರ ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆ)
* ಎ.ಪಿ.ಸಿ ರಾಮಪ್ಪ ಪೂಜಾರಿ (ದಾವಣಗೆರೆ ಜಿಲ್ಲೆಯ ಡಿಎಆರ್)
ಮುಖ್ಯಮಂತ್ರಿಗಳು ಈ ಎಂಟು ಮಂದಿ ಸೇರಿದಂತೆ ದೇಶದ ಎಲ್ಲಾ ಹುತಾತ್ಮರ ಗೌರವಾರ್ಥ ಕಾರ್ಯಕ್ರಮದಲ್ಲಿ ನಮನಗಳನ್ನು ಸಲ್ಲಿಸಲಿದ್ದಾರೆ.
1959 ಇಸವಿಯಲ್ಲಿ ನಡೆದ ದಾರುಣ ಘಟನೆಯ ನೆನಪು :
ಅಕ್ಟೋಬರ್ 21ರಂದು ಈ ದಿನಾಚರಣೆಯನ್ನು ಆಚರಿಸಲು ಐತಿಹಾಸಿಕ ಕಾರಣವಿದೆ. 1959ರ ಅಕ್ಟೋಬರ್ 21ರಂದು, ಕೇಂದ್ರ ಮೀಸಲು ಪೊಲೀಸ್ ಪಡೆಯ ಎಸ್. ಐ. ಕರಂ ಸಿಂಗ್ ನೇತೃತ್ವದ 20 ಜನರ ತಂಡ ಲಡಾಕ್‌ನ ಹಾಟ್‌ಸ್ಟಿಂಗ್ ಎಂಬ ಪ್ರದೇಶದಲ್ಲಿ ಗಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ, ನೆರೆಯ ಚೀನಾ ದೇಶದ ಸೈನಿಕರು ಹಠಾತ್ ದಾಳಿ ನಡೆಸಿದ್ದರು.
ಈ ದಾಳಿಯಲ್ಲಿ ಕರಂ ಸಿಂಗ್ ಮತ್ತು ಇತರೆ 09 ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಈ ದಾರುಣ ಘಟನೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ನೆನಪಿಗಾಗಿ ಪ್ರತಿ ವರ್ಷ ಈ ದಿನವನ್ನು ರಾಷ್ಟ್ರದಾದ್ಯಂತ ಪೊಲೀಸ್ ಸಂಸ್ಮರಣಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.






















