ಮಂಡ್ಯ, ಅ.19 www.bengaluruwire.com : ಮಂಡ್ಯ ಜಿಲ್ಲೆಯ ಮಳವಳ್ಳಿ ಸಮೀಪದ ಬಾಚನಹಳ್ಳಿ ಕ್ರಾಸ್ ಬಳಿ ಶನಿವಾರ (ಅ. 19) ಸಂಜೆ 5 ಗಂಟೆ ಸುಮಾರಿಗೆ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್‌ಗಳ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಓರ್ವ ಮಹಿಳಾ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಸರಣಿ ಡಿಕ್ಕಿಯ ಭೀಕರತೆ:
ಘಟನೆಯು ಎರಡು ಹಂತಗಳಲ್ಲಿ ಸಂಭವಿಸಿದೆ ಎನ್ನಲಾಗಿದೆ. ಮೊದಲು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಡಿಕ್ಕಿಯ ಪರಿಣಾಮವಾಗಿ ಎರಡೂ ಬಸ್‌ಗಳು ರಸ್ತೆಯಲ್ಲಿ ನಿಂತಿದ್ದವು. ಇದಾದ ಕೆಲವೇ ಕ್ಷಣಗಳಲ್ಲಿ, ನಿಂತಿದ್ದ ಈ ಬಸ್‌ಗಳಿಗೆ ಮತ್ತೊಂದು ಬಿಎಂಟಿಸಿ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಿಂದಾಗಿ ದುರಂತದ ಪ್ರಮಾಣ ಹೆಚ್ಚಿದೆ.
ಗಾಯಾಳುಗಳಿಗೆ ಆಸ್ಪತ್ರೆಗೆ ದಾಖಲು:

ಅಪಘಾತದ ತೀವ್ರತೆಗೆ ಬಸ್‌ಗಳಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯರು ಮತ್ತು ಪೊಲೀಸರ ನೆರವಿನಿಂದ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. “ಗಂಭೀರವಾಗಿ ಗಾಯಗೊಂಡವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಗಾಯಾಳುಗಳಿಗೆ ಮಳವಳ್ಳಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಘಾತದಿಂದಾಗಿ ಕೆಎಸ್ ಆರ್ ಟಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ, ಬದುಕುಳಿಯುವ ಸಾಧ್ಯತೆ ಕಡಿಮೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ದಾಖಲು, ಪೊಲೀಸರಿಂದ ಪರಿಶೀಲನೆ:
ದುರಂತ ಸಂಭವಿಸಿದ ತಕ್ಷಣ ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























