ಬೆಂಗಳೂರು, ಅ.18 www.bengaluruwire.com : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಇತ್ತೀಚೆಗೆ ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ವತಿಯಿಂದ ಪ್ರಶಸ್ತಿ ಲಭಿಸಿದ ಕುರಿತು ಮುಖ್ಯಮಂತ್ರಿಗಳ ‘ಎಕ್ಸ್’ ಖಾತೆಯಲ್ಲಿ ಪ್ರಕಟವಾದ ಪೋಸ್ಟ್‌ಗೆ ಸಂಬಂಧಿಸಿದಂತೆ ಸಾರ್ವಜನಿಕ ಟಿಪ್ಪಣಿ (ಕಮ್ಯೂನಿಟಿ ನೋಟ್) ಸೇರ್ಪಡೆಯಾಗಿದ್ದರಿಂದ ಉಂಟಾದ ವಿವಾದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ.
ಪ್ರಶಸ್ತಿ ಪ್ರಕಟಣೆ ಕುರಿತ ಪೋಸ್ಟ್ ಅನ್ನು ಹೆಚ್ಚಿನ ತಪ್ಪು ಗ್ರಹಿಕೆಗೆ ಅವಕಾಶ ನೀಡಬಾರದೆಂಬ ಕಾರಣಕ್ಕೆ ಡಿಲೀಟ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ, ಯಾವುದೇ ಮೂರನೇ ವ್ಯಕ್ತಿಯ ಮಾನ್ಯತೆ ಹೊರತಾಗಿಯೂ, ಕೆಎಸ್‌ಆರ್‌ಟಿಸಿಯ ಸಾಧನೆಗಳು ಸಂಪೂರ್ಣ ವಾಸ್ತವ ಮತ್ತು ಪರಿಶೀಲಿಸಬಹುದಾದಂತಿವೆ ಎಂದು ಅವರು ದೃಢಪಡಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಸಾಧನೆಗಳು ಮತ್ತು ‘ಶಕ್ತಿ’ ಯಶಸ್ಸು:
ಕೆಎಸ್‌ಆರ್‌ಟಿಸಿ 1997ರಿಂದ ಇಲ್ಲಿಯವರೆಗೆ 464 ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಲಂಡನ್ ಬುಕ್ ಆಫ್ ರೆಕಾರ್ಡ್ ಒಂದು ಖಾಸಗಿ ಸಂಸ್ಥೆಯಾಗಿದ್ದು, ಇದು ಈ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ಏಕನಾಥ್ ಶಿಂಧೆ, ಪುದುಚೇರಿ ಸರ್ಕಾರ ಸೇರಿದಂತೆ ಹಲವು ಸಾಧಕರನ್ನು ಗುರುತಿಸಿ ಗೌರವಿಸಿದೆ.

ಅತ್ಯಂತ ಮುಖ್ಯವಾಗಿ, ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಅತಿಹೆಚ್ಚು ಉಚಿತ ಟಿಕೆಟ್ ವಿತರಿಸುವ ಮೂಲಕ ರಾಜ್ಯವು ಉನ್ನತ ಸಾಧನೆ ಮಾಡಿದೆ. ಈ ಯೋಜನೆಯಡಿ ಇದುವರೆಗೆ ಮಹಿಳೆಯರು ಸುಮಾರು 500 ಕೋಟಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿದ್ದು, ಇದು ವಿಶ್ವದಲ್ಲೇ ಅತಿದೊಡ್ಡ ಮಹಿಳಾ ಕಲ್ಯಾಣ ಕಾರ್ಯಕ್ರಮ ಎಂಬ ಶ್ಲಾಘನೆಗೆ ಪಾತ್ರವಾಗಿದೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಫಿಲೆಮನ್ ಯಾಂಗ್ ಅವರೂ ಸಹ ‘ಶಕ್ತಿ’ ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಎಸ್‌ಆರ್‌ಟಿಸಿಯ ರಾಷ್ಟ್ರೀಯ ನಾಯಕತ್ವ ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ಅದ್ಭುತ ಯಶಸ್ಸನ್ನು ಸಹಿಸಲಾಗದವರು ಸಣ್ಣಪುಟ್ಟ ತಾಂತ್ರಿಕ ದೋಷಗಳನ್ನು ದೊಡ್ಡದು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಕರ್ನಾಟಕ ಸರ್ಕಾರವು ಜನಪರ ಕಾರ್ಯಕ್ರಮ ನೀಡುವ ಬದ್ಧತೆಯಿಂದ ವಿಮುಖವಾಗುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.






















