ಬೆಳಗಾವಿ, ಅ.18 www.bengaluruwire.com : ವಾಣಿಜ್ಯ ತೆರಿಗೆ ಗುಪ್ತಚರ ನಿರ್ದೇಶನಾಲಯದ (DGGI) ಬೆಳಗಾವಿ ಪ್ರಾದೇಶಿಕ ಘಟಕವು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬೃಹತ್ ಪ್ರಮಾಣದ ಜಿಎಸ್‌ಟಿ ವಂಚನೆಯನ್ನು ಪತ್ತೆಹಚ್ಚಿದ್ದು, ಲೋಹದ ಸ್ಕ್ರ್ಯಾಪ್ (Metal Scrap) ವ್ಯಾಪಾರದಲ್ಲಿ ನಡೆದಿರುವ ₹21.64 ಕೋಟಿ ಮೊತ್ತದ ತೆರಿಗೆ ವಂಚನೆಯನ್ನು ಬಯಲಿಗೆ ಎಳೆದಿದೆ.
ಈ ಕುರಿತು ಡಿಜಿಜಿಐ ಬೆಳಗಾವಿ ಘಟಕದ ಅಧಿಕಾರಿಗಳು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಹರಿಹರದ ಮೆ. ಮರಿಯಮ್ ಸ್ಕ್ರ್ಯಾಪ್ ಡೀಲರ್ಸ್ (M/s Mariyam Scrap Dealers) ಅವರ ಆವರಣದಲ್ಲಿ ನಡೆದ ಪರಿಶೀಲನೆ ಕಾರ್ಯಾಚರಣೆಯಲ್ಲಿ ಈ ಬೃಹತ್ ವಂಚನೆ ಬೆಳಕಿಗೆ ಬಂದಿದೆ.
ನಕಲಿ ಇನ್‌ವಾಯ್ಸ್‌ಗಳ ಮೂಲಕ ₹17.14 ಕೋಟಿ ಐಟಿಸಿ ವಂಚನೆ :
ತನಿಖೆಯ ಪ್ರಕಾರ, ಸಂಸ್ಥೆಯು ಸುಮಾರು ₹112 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್‌ಗಳನ್ನು (Fake Invoices) ವಿತರಿಸಿದೆ. ಈ ಇನ್‌ವಾಯ್ಸ್‌ಗಳ ಆಧಾರದ ಮೇಲೆ ಅಕ್ರಮವಾಗಿ ಸುಮಾರು ₹17.14 ಕೋಟಿ ಮೊತ್ತದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಸಂಸ್ಥೆಯ ಮುಖ್ಯಸ್ಥ ಮತ್ತು ಕಾರ್ಯಾಚರಣೆಗಳ ಪ್ರಮುಖ ಜವಾಬ್ದಾರಿ ಹೊತ್ತಿದ್ದ ಶ್ರೀ ಮೊಹಮ್ಮದ್ ಸಕ್ಲೈನ್ ಅವರು, ಇಲಾಖೆಯು ಸಂಗ್ರಹಿಸಿದ ಪುರಾವೆಗಳ ಮುಂದೆ ಜಿಎಸ್‌ಟಿ ವಂಚನೆಯನ್ನು ಒಪ್ಪಿಕೊಂಡಿದ್ದಾರೆ. ನಕಲಿ ಬಿಲ್‌ಗಳ ಆಧಾರದ ಮೇಲೆ ಐಟಿಸಿ ದುರುಪಯೋಗಪಡಿಸಿಕೊಂಡಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ, ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ಪಾವತಿಸಬೇಕಿದ್ದ ₹4.50 ಕೋಟಿ ಜಿಎಸ್‌ಟಿಯನ್ನು ಕಡಿಮೆ ಪಾವತಿ ಮಾಡಿರುವುದನ್ನೂ ಒಪ್ಪಿಕೊಂಡಿದ್ದು, ಈ ಎರಡೂ ವಂಚನೆಯ ಮೊತ್ತ ಸೇರಿ ಒಟ್ಟು ₹21.64 ಕೋಟಿ ಜಿಎಸ್‌ಟಿ ವಂಚನೆ ನಡೆದಿರುವುದು ದೃಢಪಟ್ಟಿದೆ.
ಕಾರ್ಯವಿಧಾನ ಮತ್ತು ವಂಚನೆಯ ಸ್ವರೂಪ ಹೇಗಿತ್ತು? :
ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವ ಪ್ರಕಾರ, ತೆರಿಗೆದಾರರು ಬಹುತೇಕ ಲೋಹದ ಸ್ಕ್ರ್ಯಾಪ್ ಅನ್ನು ನೊಂದಾಯಿಸದ ಪೂರೈಕೆದಾರರಿಂದ (Unregistered Suppliers) ಸಂಗ್ರಹಿಸಿದ್ದಾರೆ. ಈ ವಹಿವಾಟುಗಳಿಗೆ ಸಂಬಂಧಿಸಿದಂತೆ ಐಟಿಸಿ ಲಭ್ಯವಿರಲಿಲ್ಲ. ಆದರೆ, ನೋಂದಾಯಿತ ಸಂಸ್ಥೆಗಳಿಂದ ಮಾಡಿದ ಖರೀದಿಗಳಲ್ಲಿ ಬಹುಪಾಲು ಅಸ್ತಿತ್ವದಲ್ಲಿಲ್ಲದ (Non-existent) ಅಥವಾ ನಕಲಿ (Fictitious) ಘಟಕಗಳಿಂದ ಬಂದಿವೆ ಎಂದು ಕಂಡುಬಂದಿದೆ.
ಮೆ. ಮರಿಯಮ್ ಸ್ಕ್ರ್ಯಾಪ್ ಡೀಲರ್ಸ್ ಸಂಸ್ಥೆಯು ನೋಂದಾಯಿಸದ ವ್ಯಾಪಾರಿಗಳಿಂದ ಮಾಡಿದ ನಿಜವಾದ ಖರೀದಿಗಳನ್ನು ನಕಲಿ ಘಟಕಗಳಿಂದ ಬಂದಿರುವ ನಕಲಿ ಐಟಿಸಿ ರಸೀದಿಗಳೊಂದಿಗೆ ಜೋಡಿಸಿ, ಜಿಎಸ್‌ಟಿ ಪಾವತಿಗೆ ವಂಚನೆ ಮಾಡಿದೆ ಮತ್ತು ನಕಲಿ ಕ್ರೆಡಿಟ್ ಹರಿವಿಗೆ (Credit Flow) ಅನುಕೂಲ ಮಾಡಿಕೊಟ್ಟಿದೆ. ಈ ಸಂಸ್ಥೆಗಳು ಕಮಿಷನ್‌ಗಾಗಿ ನಕಲಿ ಇನ್‌ವಾಯ್ಸ್‌ಗಳನ್ನು ನೀಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಬಳಸಿ ಬೋಗಸ್ ಜಿಎಸ್‌ಟಿ ನೋಂದಣಿಗಳನ್ನು ಪಡೆದಿರುವುದು ಕೂಡ ತನಿಖೆಯಿಂದ ಬಯಲಾಗಿದೆ.
ಪ್ರಮುಖ ಆರೋಪಿ ಬಂಧನ, 14 ದಿನಗಳ ನ್ಯಾಯಾಂಗ ಬಂಧನಕ್ಕೆ :
ವಂಚನೆಯ ಗಂಭೀರತೆಯನ್ನು ಗಮನಿಸಿ, ಡಿಜಿಜಿಐ ಅಧಿಕಾರಿಗಳು ಶ್ರೀ ಮೊಹಮ್ಮದ್ ಸಕ್ಲೈನ್ ಅವರನ್ನು ದಿನಾಂಕ 17.10.2025 ರಂದು ಸಿಜಿಎಸ್‌ಟಿ ಕಾಯಿದೆ, 2017ರ ಸೆಕ್ಷನ್ 69ರ ಅಡಿಯಲ್ಲಿ ಬಂಧಿಸಿದ್ದಾರೆ. ಅವರನ್ನು ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಡಿಜಿಜಿಐ ಮೂಲಗಳು ತಿಳಿಸಿವೆ.






















