ಬೆಂಗಳೂರು, ಅ.18 www.bengaluruwire.com : ನಾಡಿನ ಪ್ರಮುಖ ಹಬ್ಬಗಳಲ್ಲೊಂದಾದ ದೀಪಾವಳಿ ಮತ್ತು ಬಲಿಪಾಡ್ಯಮಿ ಆಚರಣೆಯ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ರ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿರುವ ಸುಮಾರು 16 ಸಾವಿರ ನೌಕರರಿಗೆ ಅಕ್ಟೋಬರ್ 19 ರಿಂದ 23ರ ತನಕ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು (KSGEA) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಅಕ್ಟೋಬರ್ 17 ರಂದು ಈ ಮನವಿ ಸಲ್ಲಿಸಲಾಗಿದ್ದು, ಅಕ್ಟೋಬರ್ 19 ರಿಂದ ಐದು ದಿನಗಳ ಕಾಲ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡುವಂತೆ ಕೋರಲಾಗಿದೆ.
ಮನವಿಗೆ ಕಾರಣಗಳು:
ಸ್ಥಳೀಯ ನಿವಾಸಿಗಳು ಊರಿಗೆ ತೆರಳುವುದು: ದೀಪಾವಳಿ ಹಬ್ಬಕ್ಕಾಗಿ ಬೆಂಗಳೂರಿನ ಬಹುತೇಕ ನಿವಾಸಿಗಳು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ, ಅಂತಹ ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳುವುದು ಕಷ್ಟವಾಗುತ್ತದೆ ಎಂದು ಸಂಘವು ತಿಳಿಸಿದೆ.

ನೌಕರರ ಹಬ್ಬದ ಆಚರಣೆ:
ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ನೌಕರರು, ವಿಶೇಷವಾಗಿ ಮಹಿಳಾ ನೌಕರರು, ದೀಪಾವಳಿ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಈ ಅವಧಿಯಲ್ಲಿ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ.
ನಿರಂತರ ಕೆಲಸ:
ಬೆಂಗಳೂರು ನಗರ ಜಿಲ್ಲೆಯಲ್ಲಿ ಅಕ್ಟೋಬರ್ 4 ರಿಂದ ಆರಂಭವಾಗಿರುವ ಸಮೀಕ್ಷಾ ಕಾರ್ಯದಲ್ಲಿ, ಸುಮಾರು 16 ಸಾವಿರ ನೌಕರರು ಕಳೆದ 14 ದಿನಗಳಿಂದ ವಿಶ್ರಾಂತಿ ಇಲ್ಲದೆ ಮನೆ ಮನೆಗೆ ತೆರಳಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಂಘವು ಉಲ್ಲೇಖಿಸಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ-ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಸಭೆ ನಡೆಸಿ, ನೌಕರರ ಕೋರಿಕೆಯನ್ನು ಸಂಬಂಧಿಸಿದವರ ಗಮನಕ್ಕೆ ತರಲು ನಿರ್ಧರಿಸಲಾಯಿತು ಎಂದು ಪತ್ರದಲ್ಲಿ ವಿವರಿಸಲಾಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ, ಸಮಸ್ತ ನೌಕರರ ಪರವಾಗಿ ಹಬ್ಬದ ಆಚರಣೆಗಾಗಿ ಗಣತಿ ಕಾರ್ಯದಿಂದ ವಿನಾಯಿತಿ ನೀಡುವಂತೆ ಕೋರಲಾಗಿದೆ.
ಈ ಮಧ್ಯೆ ರಾಜ್ಯಾದ್ಯಂತ ಶುಕ್ರವಾರದ ವೇಳೆಗೆ ಶೇ.95.20 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಶೇ.85.72 ರಷ್ಟು ಜನರ ಗಣತಿಯ ಅಂಕಿ-ಅಂಶ ಮಾತ್ರ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಭಾನುವಾರವೂ ಸಮೀಕ್ಷೆ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಪೂರ್ವ ನಿಗದಿಯಂತೆ ಅ.18 ರ ಇಂದು ಸಮೀಕ್ಷೆ ಪೂರ್ಣಗೊಳ್ಳಬೇಕು.
ನಿರೀಕ್ಷಿತ ಪ್ರಮಾಣದಲ್ಲಿ ಜನಸಂಖ್ಯೆಯ ಗಣತಿ ಆಗಿಲ್ಲ. ಹೀಗಾಗಿ ಅ.19 ರಂದು ಭಾನುವಾರವೂ ಸಮೀಕ್ಷೆ ಮುಂದುವರೆಸಲು ತಿಳಿಸಿದ್ದು, ಭಾನುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಮೀಕ್ಷೆಯನ್ನು ಮುಂದುವರೆಸಬೇಕೇ ಅಥವಾ ಮುಕ್ತಾಯಗೊಳಿಸಬೇಕೇ ಎಂಬ ಕುರಿತು ನಿರ್ಧಾರವಾಗಲಿದೆ ಎನ್ನಲಾಗಿದೆ.






















