ಬೆಂಗಳೂರು, ಅ.17 www.bengaluruwire.com : ರಾಜ್ಯ ಸರ್ಕಾರವು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಚಟುವಟಿಕೆಗಳು ಸೇರಿದಂತೆ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಗಳಿಗೆ ಸರ್ಕಾರಿ ಸ್ಥಳಗಳು, ಅನುದಾನಿತ ಶಾಲೆಗಳ ಆವರಣ ಹಾಗೂ ಸಾರ್ವಜನಿಕ ಸ್ಥಳಗಳನ್ನು ಬಳಸಲು ಕಡ್ಡಾಯ ಅನುಮತಿ ಪಡೆಯಬೇಕೆಂದು ತೀರ್ಮಾನಿಸಿತ್ತು.
ಈ ನಿರ್ಧಾರದ ಬೆನ್ನಲ್ಲೇ, ವಿಜಯಪುರ ಶಾಸಕ ಹಾಗೂ ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸರ್ಕಾರಕ್ಕೆ ಠಕ್ಕರ್ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅ.17ರಂದು ಪತ್ರ ಬರೆದಿದ್ದಾರೆ. ಸರ್ಕಾರದ ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆ ಮತ್ತು ಸರ್ಕಾರಿ ಆವರಣಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನು ಅವರು ತಮ್ಮ ಅಧಿಕೃತ ಎಕ್ಸ್ ಜಾಲತಾಣದಲ್ಲಿ ಬಹಿರಂಗವಾಗಿ ಪ್ರಕಟಿಸಿದ್ದಾರೆ.
‘ನಮಾಜ್‌ಗೆ ಯಾವುದೇ ವಿಶೇಷ ಅವಕಾಶ ಬೇಡ’ :
ಯತ್ನಾಳ್ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ, “ಪೂರ್ವಾನುಮತಿಯಿಲ್ಲದೆ ಸಾರ್ವಜನಿಕ ರಸ್ತೆಗಳು ಮತ್ತು ಸರ್ಕಾರಿ ಆಸ್ತಿಗಳ ಮೇಲೆ ಜನರು ನಮಾಜ್ ಸಲ್ಲಿಸುತ್ತಿರುವುದನ್ನು ನಾವು ನೋಡಿದ್ದೇವೆ. ಇಂತಹ ಚಟುವಟಿಕೆಗಳು ಸಾರ್ವಜನಿಕರಿಗೆ ತೊಂದರೆ, ಪಾದಚಾರಿ ಮತ್ತು ವಾಹನ ಸಂಚಾರಕ್ಕೆ ಅಡಚಣೆಯನ್ನುಂಟುಮಾಡುತ್ತವೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳಾದ ಸಂವಿಧಾನದ ಕಲಂ 19 ಮತ್ತು 21 ರ ಅಡಿಯಲ್ಲಿ ಖಾತರಿಪಡಿಸಿದ ಮುಕ್ತ ಸಂಚಾರ ಮತ್ತು ಭದ್ರತೆಗೆ ಧಕ್ಕೆ ತರುತ್ತವೆ,” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

“ಸರ್ಕಾರಿ ಕಚೇರಿಗಳು ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನಮಾಜ್ ಅಥವಾ ಯಾವುದೇ ಇತರ ಆಚರಣೆಗಳನ್ನು ನಡೆಸಲು ಯಾವುದೇ ವಿಶೇಷ ಅವಕಾಶ ಇರಬಾರದು” ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಏಕರೂಪದ ಜಾರಿ ಮತ್ತು ಕಾನೂನಿನ ಸಮಾನತೆಗೆ ಒತ್ತಾಯ :
ಖಾಸಗಿ ಆಸ್ತಿಗಳು, ಸಂಸ್ಥೆಗಳು ಮತ್ತು ಶೈಕ್ಷಣಿಕ ಸ್ಥಳಗಳನ್ನು ಬಳಸುವ ಸರ್ಕಾರಿ ನಿರ್ಧಾರವನ್ನು ಉಲ್ಲೇಖಿಸಿರುವ ಯತ್ನಾಳ್, “ಸಾರ್ವಜನಿಕ ಸ್ಥಳಗಳನ್ನು ಖಾಸಗಿ ಅಥವಾ ಸಾಂಸ್ಥಿಕ ಉದ್ದೇಶಗಳಿಗಾಗಿ ಬಳಸುವುದರಿಂದ ಖಾಸಗಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ನಿರ್ಬಂಧಿಸುವ ಸರ್ಕಾರದ ಇತ್ತೀಚಿನ ನಿರ್ಧಾರದ ಹಿನ್ನೆಲೆಯಲ್ಲಿ, ಸಮಾಜದ ಎಲ್ಲಾ ವರ್ಗಗಳಲ್ಲಿ ತಟಸ್ಥತೆ ಮತ್ತು ನ್ಯಾಯವನ್ನು ಏಕರೂಪವಾಗಿ ಜಾರಿಗೊಳಿಸುವುದು ಅತ್ಯಗತ್ಯ,” ಎಂದು ಪ್ರತಿಪಾದಿಸಿದ್ದಾರೆ.
ಪೂರ್ವಾನುಮತಿಯಿಲ್ಲದೆ ರಸ್ತೆಗಳು, ಪಾದಚಾರಿ ಮಾರ್ಗಗಳು ಅಥವಾ ಸರ್ಕಾರಿ ಆವರಣಗಳಲ್ಲಿ ನಮಾಜ್ ನಡೆಸದಂತೆ ನೋಡಿಕೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡುವಂತೆ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಎಸ್‌ಒಪಿ ರಚನೆಗೆ ಆಗ್ರಹ :
ಧರ್ಮನಿರಪೇಕ್ಷತೆ, ಕಾನೂನಿನ ಸಮಾನತೆ ಮತ್ತು ಸಾರ್ವಜನಿಕ ಶಿಸ್ತಿಗೆ ಸರ್ಕಾರದ ಬದ್ಧತೆಯನ್ನು ಬಲಪಡಿಸಲು, ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಸಂಬಂಧಿತ ಸಂಚಾರ ನಿಯಮಾವಳಿಗಳ ಅಡಿಯಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಸಾರ್ವಜನಿಕ ಸ್ಥಳಗಳ ಅನಧಿಕೃತ ಬಳಕೆಯನ್ನು ನಿಯಂತ್ರಿಸಲು ಸರ್ಕಾರವು ಸ್ಪಷ್ಟವಾದ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಅಥವಾ ಸುತ್ತೋಲೆಯನ್ನು ರೂಪಿಸಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಯಾವುದೇ ಧಾರ್ಮಿಕ ಉದ್ದೇಶಕ್ಕಾಗಿ ಸಾರ್ವಜನಿಕ ಸ್ಥಳಗಳನ್ನು ಅನಧಿಕೃತವಾಗಿ ಬಳಸುವುದನ್ನು ನಿಷೇಧಿಸುವ ಈ ಕ್ರಮಗಳು ಕೋಮು ಸಾಮರಸ್ಯವನ್ನು ಕಾಪಾಡಲು, ಸಾರ್ವಜನಿಕ ಶಿಸ್ತನ್ನು ಉತ್ತೇಜಿಸಲು ಮತ್ತು ವಿವಾದಗಳನ್ನು ತಪ್ಪಿಸಲು ಸಹಕಾರಿಯಾಗಲಿದೆ ಎಂದು ಪತ್ರದಲ್ಲಿ ಒತ್ತಿ ಹೇಳಲಾಗಿದೆ.






















