ಬೆಂಗಳೂರು, ಅ.17 www.bengaluruwire.com : ನಗರದ ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ, ದೀಪಾವಳಿ ಹಬ್ಬದ ಪ್ರಯುಕ್ತ ಬಿ-ಪ್ಯಾಕ್ (B.PAC – Bangalore Political Action Committee) ಸಂಸ್ಥೆಯು ಶುಕ್ರವಾರ ಸಿಹಿ ತಿನಿಸು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಬಿಬಿಎಂಪಿಯ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಜಿಬಿಎ ಕೇಂದ್ರ ಕಛೇರಿಯ ಕೌನ್ಸಿಲ್ ಕಟ್ಟಡದ ಮುಂಭಾಗದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪೌರಕಾರ್ಮಿಕರಿಗೆ ಸಿಹಿ ವಿತರಿಸಿದರು.
ದೀಪಾವಳಿಯಂತಹ ಪ್ರಮುಖ ಹಬ್ಬದ ಸಂದರ್ಭದಲ್ಲೂ ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಅವರ ಈ ಅವಿರತ ಶ್ರಮವನ್ನು ಗೌರವಿಸುವ ಉದ್ದೇಶದಿಂದ ಬಿ-ಪ್ಯಾಕ್ ಸಂಸ್ಥೆಯು ಸತತ ಐದು ವರ್ಷಗಳಿಂದ ಈ ಸಿಹಿ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಈ ವರ್ಷವೂ ಬಿ-ಪ್ಯಾಕ್ ನಗರದಲ್ಲಿರುವ ಸುಮಾರು 28,000 ಪೌರಕಾರ್ಮಿಕ ಸಿಬ್ಬಂದಿಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಸಿಹಿ ತಿನಿಸುಗಳನ್ನು ನೀಡಲು ನಿರ್ಧರಿಸಿದೆ.

ಕಾರ್ಯಕ್ರಮದ ಭಾಗವಾಗಿ, ಇಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮೊದಲು ಸಂಪಂಗಿರಾಮನಗರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸ್ವತಃ ಸಿಹಿ ತಿನಿಸುಗಳನ್ನು ವಿತರಿಸಿ, ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು, ಬಿ-ಪ್ಯಾಕ್ ಸಿವಿಕ್ ಪ್ರತಿನಿಧಿಗಳು, ಪೌರಕಾರ್ಮಿಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






















