ಬೆಂಗಳೂರು, ಅ.15 www.bengaluruwire.com : ಗ್ರೇಟರ್ ಬೆಂಗಳೂರು ಪ್ರದೇಶದ (ಹಿಂದಿನ ಬಿಬಿಎಂಪಿ) ನಗರ ಯೋಜನೆಯ ಮಹತ್ವದ ಜವಾಬ್ದಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಅಧಿಕೃತವಾಗಿ ಹಸ್ತಾಂತರಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆಯು ಅಕ್ಟೋಬರ್ 10 ರಂದು ಹೊರಡಿಸಿರುವ ಆದೇಶದ ಅನ್ವಯ, ‘ಗ್ರೇಟರ್ ಬೆಂಗಳೂರು ಪ್ರದೇಶ’ವನ್ನು ‘ಗ್ರೇಟರ್ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ವೆಂದು (GBLPA) ಘೋಷಿಸಲಾಗಿದ್ದು, ಕರ್ನಾಟಕ ನಗರ ಮತ್ತು ಗ್ರಾಮೀಣ ಯೋಜನಾ ಕಾಯ್ದೆ- 1961ರ ಅಡಿಯಲ್ಲಿ ನಗರ ಯೋಜನೆಯ ಸಂಪೂರ್ಣ ಹೊಣೆಯನ್ನು ಜಿಬಿಎಗೆ ವಹಿಸಲಾಗಿದೆ.
ಸಂಪೂರ್ಣ ಹೊಣೆ ಹೊತ್ತ ಜಿಬಿಎ :
ಈ ನಿರ್ಧಾರದೊಂದಿಗೆ, ಜಿಬಿಎ ತನ್ನ ವ್ಯಾಪ್ತಿಯಲ್ಲಿ ‘ಯೋಜನಾ ಪ್ರಾಧಿಕಾರ’ದ ಸ್ಥಾನಮಾನ ಪಡೆದಿದೆ. ಇದರಿಂದ, ವಸತಿ ಮತ್ತು ಕೈಗಾರಿಕಾ ಬಡಾವಣೆಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಇದು ಹೊಂದಿದೆ. ಅಲ್ಲದೆ, ಇಡೀ ನಗರಕ್ಕೆ ಅಗತ್ಯವಿರುವ ಮಾಸ್ಟರ್ ಪ್ಲಾನ್ (ಮಹಾಯೋಜನೆ) ಸಿದ್ಧಪಡಿಸಿ, ನಗರ ಪಾಲಿಕೆಗಳು ಅದನ್ನು ಕಟ್ಟುನಿಟ್ಟಾಗಿ ಅನುಸರಿಸುವುದನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನೂ ನಿರ್ವಹಿಸಲಿದೆ.


ಜಿಬಿಎ ರೂಪಿಸುವ ಮಾಸ್ಟರ್ ಪ್ಲಾನ್‌ನಂತೆಯೇ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಹ ತನ್ನ ವ್ಯಾಪ್ತಿಯಲ್ಲಿ ಕೈಗಾರಿಕಾ ಬಡಾವಣೆ ಹಾಗೂ ಕಟ್ಟಡ ನಕ್ಷೆಗಳನ್ನು ಅನುಮೋದಿಸಬೇಕಿದೆ.
ಹಳೆಯ ನಿಯಮಗಳು ಮುಂದುವರಿಕೆ :
ಹೊಸ ‘ಗ್ರೇಟರ್ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ಕ್ಕೆ ಮಹಾಯೋಜನೆಯು ಅನುಮೋದನೆಯಾಗುವವರೆಗೆ, ಬಿಡಿಎ ಅನುಮೋದಿಸಿದ್ದ ಪರಿಷ್ಕೃತ ಮಾಸ್ಟರ್ ಪ್ಲಾನ್ (ಆರ್‌ಎಂಪಿ-2015) ಮತ್ತು ವಲಯ ನಿಯಮಾವಳಿಗಳು ಜಾರಿಯಲ್ಲಿರಲಿವೆ. ಬಿಡಿಎ ಹಾಗೂ ಸರ್ಕಾರದಿಂದ ಈ ಹಿಂದಿನ ಎಲ್ಲ ನಿಯಮಗಳು, ಆದೇಶಗಳು, ನಿರ್ದೇಶನಗಳು, ಅನುಮೋದನೆ/ಮಂಜೂರಾತಿಗಳು ಮುಂದುವರಿಯಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಯೋಜನಾ ಪ್ರಾಧಿಕಾರವಾಗಿರುವ ಜಿಬಿಎ, ಪ್ರತಿ ಹಣಕಾಸು ವರ್ಷದ ಅಂತ್ಯಕ್ಕೆ ತನ್ನ ವಾರ್ಷಿಕ ವರದಿ, ಲೆಕ್ಕ ತಪಾಸಣಾ ವರದಿ, ಹಾಗೂ ಆಯವ್ಯಯವನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಸ್ಥಳೀಯ ಯೋಜನಾ ಪ್ರಕ್ರಿಯೆಗಳನ್ನು ನಿರ್ವಹಿಸಲು ಜಿಬಿಎ ಮುಖ್ಯ ಆಯುಕ್ತರು ನಗರ ಯೋಜನಾ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಿದ್ದಾರೆ.
ಜಿಬಿಎ ವ್ಯಾಪ್ತಿಯ ಹೋಬಳಿ ಮತ್ತು ತಾಲೂಕಿನೊಂದಿಗೆ 303 ಗ್ರಾಮಗಳ ಹೆಸರಿನ ಪಟ್ಟಿ ಈ ಕೆಳಕಂಡಂತಿದೆ :
ಬಿಎಂಐಸಿಎಪಿಎ ಹೊರಗೆ, 303 ಗ್ರಾಮಗಳು ಸೇರ್ಪಡೆ
ಪ್ರಸ್ತುತ ‘ಗ್ರೇಟರ್ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶ’ದಿಂದ ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ನ ಸ್ಥಳೀಯ ಯೋಜನಾ ಪ್ರದೇಶವನ್ನು (ಬಿಎಂಐಸಿಎಪಿಎ) ಹೊರಗಿಡಲಾಗಿದೆ. ನೈಸ್‌ನೊಂದಿಗೆ ಭೂ ವ್ಯಾಜ್ಯ ಇರುವುದರಿಂದ ಈ ಪ್ರದೇಶವನ್ನು ಸದ್ಯಕ್ಕೆ ಸೇರಿಸಿಲ್ಲ. 719.29 ಚದರ ಕಿ.ಮೀ ವ್ಯಾಪ್ತಿಯ ಜಿಬಿಎ ಪ್ರದೇಶದಲ್ಲಿ, ಈಗ 683 ಚದರ ಕಿ.ಮೀ ಮಾತ್ರ ಯೋಜನಾ ಪ್ರದೇಶವಾಗಿದೆ.
ಹೊಸ ಯೋಜನಾ ಪ್ರದೇಶವು ಒಟ್ಟಾರೆ 68,351.89 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ. ಇದರಲ್ಲಿ 303 ಗ್ರಾಮಗಳ ವ್ಯಾಪ್ತಿಯು 60,627.32 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದರೆ, ಬೆಂಗಳೂರು ಕೇಂದ್ರ ಪೇಟೆ ಪ್ರದೇಶವು 7,724.56 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಈ 303 ಗ್ರಾಮಗಳು, ಬೆಂಗಳೂರು ಪೂರ್ವ, ಉತ್ತರ, ದಕ್ಷಿಣ ಹಾಗೂ ಆನೇಕಲ್ ಎಂಬ ನಾಲ್ಕು ತಾಲೂಕುಗಳು ಮತ್ತು ಅದರಲ್ಲಿನ ಸರ್ಜಾಪುರ, ಬಿದರಹಳ್ಳಿ, ಕೆ.ಆರ್.ಪುರ, ವರ್ತೂರು, ಜಾಲ, ಕಸಬಾ, ಯಲಹಂಕ, ಯಶವಂತಪುರ, ಬೇಗೂರು, ಕೆಂಗೇರಿ ಹಾಗೂ ಉತ್ತರಹಳ್ಳಿ ಈ 11 ಹೋಬಳಿಗಳ ವ್ಯಾಪ್ತಿಗೆ ಸೇರಿವೆ.
































