ಬೆಂಗಳೂರು, ಅ.11 www.bengaluruwire.com : ರಾಜ್ಯದ ಕಾರ್ಯನಿರತ ಪತ್ರಕರ್ತರ ಪ್ರತಿಷ್ಠಿತ ಪ್ರಾತಿನಿಧಿಕ ಸಂಘಟನೆಯಾದ “ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ” (KUWJ) ದ 2025-28 ನೇ ಅವಧಿಯ ಆಡಳಿತ ಮಂಡಳಿಯ ಚುನಾವಣೆಯು ನವೆಂಬರ್ 9 ರಂದು ನಡೆಯಲಿದೆ.
ಈ ಮಹತ್ವದ ಚುನಾವಣಾ ವೇಳಾಪಟ್ಟಿಯನ್ನು ಸಂಘದ ಮುಖ್ಯ ಚುನಾವಣಾಧಿಕಾರಿ ಎನ್. ರವಿಕುಮಾರ್ ಘೋಷಿಸಿದ್ದಾರೆ.
ರಾಜ್ಯ ಘಟಕ ಸೇರಿದಂತೆ ಎಲ್ಲಾ ಜಿಲ್ಲಾ ಘಟಕಗಳ ಆಡಳಿತ ಮಂಡಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದ್ದು, ಈ ಬೃಹತ್ ಪ್ರಕ್ರಿಯೆಯು ಕಾರ್ಮಿಕ ಇಲಾಖೆಯ ಉಸ್ತುವಾರಿಯಲ್ಲಿ ನಡೆಯಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 9000 ಕ್ಕೂ ಹೆಚ್ಚು ಸಕ್ರಿಯ ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಬೃಹತ್ ಸಂಘಟನೆಯಾಗಿದೆ.
ಚುನಾವಣೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:

* ಅಕ್ಟೋಬರ್ 13, ಸೋಮವಾರ: ಚುನಾವಣಾ ಅಧಿಸೂಚನೆ ಮತ್ತು ವೇಳಾಪಟ್ಟಿ ಪ್ರಕಟ, ಮತದಾರರ ಕರಡು ಪ್ರತಿ ಪ್ರಕಟ.
* ಅಕ್ಟೋಬರ್ 19 ರಿಂದ: ನಾಮಪತ್ರ ಸಲ್ಲಿಕೆ ಆರಂಭ.
* ಅಕ್ಟೋಬರ್ 27: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.
* ಅಕ್ಟೋಬರ್ 28: ನಾಮಪತ್ರಗಳ ಪರಿಶೀಲನೆ.
* ಅಕ್ಟೋಬರ್ 30: ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ.
* ನವೆಂಬರ್ 9 : ಭಾನುವಾರ (ಮತದಾನ ಮತ್ತು ಫಲಿತಾಂಶ):
* ಮತದಾನ: ಬೆಳಗ್ಗೆ 9 ರಿಂದ ಮದ್ಯಾಹ್ನ 3 ಗಂಟೆಯವರೆಗೆ.
* ಸ್ಥಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೇಂದ್ರ (ಕೆಯುಡಬ್ಲ್ಯೂಜೆ) ಕಚೇರಿ (ಕಂದಾಯ ಭವನ, 3ನೇ ಮಹಡಿ, ಕೆಜಿ ರಸ್ತೆ, ಬೆಂಗಳೂರು -09) ಮತ್ತು ಆಯಾ ಜಿಲ್ಲಾ ಕೇಂದ್ರಗಳು.
* ಫಲಿತಾಂಶ: ಮತದಾನ ಬಳಿಕ ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಪತ್ರಕರ್ತರ ಸಂಘಟನೆಯ ಮಹತ್ವದ ಈ ಚುನಾವಣೆಯು, ಮುಂದಿನ ಮೂರು ವರ್ಷಗಳ ಅವಧಿಗೆ (2025-28) ಸಂಘದ ಚುಕ್ಕಾಣಿ ಹಿಡಿಯುವ ಆಡಳಿತ ಮಂಡಳಿಯನ್ನು ನಿರ್ಧರಿಸಲಿದೆ. ಪತ್ರಕರ್ತರ ಕಲ್ಯಾಣ ಮತ್ತು ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಈ ಚುನಾವಣೆ ಪ್ರಮುಖವಾಗಿದೆ.






















