ಬೆಂಗಳೂರು, ಅ.11 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಮೀಕ್ಷೆ ಪ್ರಾರಂಭದಿಂದ ಈವರೆಗೆ 10.54 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ. ಇಂದು ಬೆಳಗ್ಗೆ ಸಮೀಕ್ಷೆ ಕಾರ್ಯದಲ್ಲಿ ನಿರತರಾಗಿದ್ದಾಗ ಜಿಬಿಎ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಕೊಟ್ಟಿಗೆಪಾಳ್ಯ ವಾರ್ಡ್ ಸಂಖ್ಯೆ 73 ರಲ್ಲಿ ಗಣತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಜಮಾಓ ರವರೇ ಮೃತಪಟ್ಟವರು. ಇವರು ಬೆಂಗಳೂರು ಜಲಮಂಡಳಿ ನೌಕರರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಜಾತಿಗಣತಿ ಸಮೀಕ್ಷೆಯಲ್ಲಿ ಪ್ರತಿದಿನ ಇಂತಿಷ್ಟು ಮನೆಗಳನ್ನು ಪೂರ್ಣಗೊಳಿಸಬೇಕೆಂಬ ಒತ್ತಡ, ಗಣತಿಗೆ ಹಿಂದುಳಿದ ವರ್ಗಳ ಇಲಾಖೆ ಸಾಕಷ್ಟು ಪೂರ್ವಸಿದ್ಧತೆ ನಡೆಸದೇ ಆತುರಾತುರವಾಗಿ ಪ್ರಶ್ನಾವಳಿ ಸಿದ್ದಪಡಿಸಿದ್ದು, ತಂತ್ರಾಂಶದಲ್ಲಿ ತೊಂದರೆ, ಸಾರ್ವಜನಿಕರ ಅಸಹಕಾರ, ನಗರ ಪ್ರದೇಶದಲ್ಲಿ ಮನೆಗಳ ಬಳಿ ಗಣತಿದಾರರು ತೆರಳಿದಾಗ ಬಾಯಿಗೆ ಬಂದಂತೆ ಬಯ್ಯುವ ಮನೆ ಮಾಲೀಕರ ನಡವಳಿಕೆಯಿಂದ ಗಣತಿ ನಿಯೋಜಿತರಾದ ಜಿಬಿಎ ಸಿಬ್ಬಂದಿ, ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಹೈರಾಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೇಗಾದರೂ ಸರಿ ತಮಗೆ ನಿರ್ವಹಿಸಿದ ಕಾರ್ಯವನ್ನು ಪೂರ್ಣಗೊಳಿಸುವ ಇಲ್ಲದಿದ್ದಲ್ಲಿ ಶೋಕಾಸ್ ನೋಟಿಸ್, ಸೇವೆಯಿಂದ ಅಮಾನತಾಗುವ ಒತ್ತಡದಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಈ ನಿಟ್ಟಿನಲ್ಲಿ ಇಂದು ಕೊಟ್ಟಿಗೆಪಾಳ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ್ ಜಮಾಓ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ತಮಗೆ ನೀಡಿದ ಗುರಿ ಮುಟ್ಟುವ ಆತುರದಲ್ಲಿ 60 ಪ್ರಶ್ನೆಗಳ ಪೈಕಿ ಸಮೀಕ್ಷೆಗೆ ಒಳಪಡುವವರಿಗೆ ಮುಜುಗರ ತರುವ ಬಹುತೇಕ ಪ್ರಶ್ನೆ ಕೇಳುವುದನ್ನು ಗಣತಿದಾರರು ತಾವೇ ಭರ್ತಿ ಮಾಡಿ, ಮನೆ ವಿಳಾಸ, ಮನೆಯವರ ಹೆಸರು, ಜಾತಿ, ಉದ್ಯೋಗ, ವಿದ್ಯಾರ್ಹತೆ ಮತ್ತಿತರ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಪಡೆದು ಕೇವಲ ಐದು ಹತ್ತು ನಿಮಿಷಗಳಲ್ಲಿ ಗಣತಿ ಕಾರ್ಯ ಪೂರ್ಣಗೊಳಿಸುತ್ತಿದ್ದಾರೆ.
ಗಣತಿಯ ಸಂಪೂರ್ಣ ಪ್ರಶ್ನೆಗಳಿಗೆ ಉತ್ತರಿಸಲು ಸಹಕಾರ ನೀಡುವವರ ಬಳಿ ಸಮೀಕ್ಷೆ ನಡೆಸಲು ಸರಿಸುಮಾರು ಒಂದು ಗಂಟೆ ಸಮಯ ಹಿಡಿಯುತ್ತಿದೆ ಎಂದು ಗಣತಿಯಲ್ಲಿ ಪಾಲ್ಗೊಂಡವರೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಅ.11ರ ಎರಡನೇ ಶನಿವಾರ ಸರ್ಕಾರಿ ರಜೆಯಿದ್ದರೂ ಐದು ನಗರ ಪಾಲಿಕೆಗಳಲ್ಲಿ ಗಣತಿಗೆ ನಿಯೋಜಿತರಾದ ಸಿಬ್ಬಂದಿ ಈ ವಾರಾಂತ್ಯದ ದಿನದಂದು ಸಂಜೆ 7.30 ಗಂಟೆಯವರೆಗೆ 1,36,197 ಮನೆಗಳನ್ನು ಸಮೀಕ್ಷೆ ನಡೆಸಿದ್ದಾರೆ.
ಕಳೆದ 8 ದಿನಗಳಲ್ಲಿ ಜಿಬಿಎ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಮೀಕ್ಷೆಯಾದ ಒಟ್ಟು ಮನೆಗಳು- 10,54,759 ಆಗಿವೆ.
ನಗರ ಪಾಲಿಕೆವಾರು ಸಮೀಕ್ಷೆ ನಡೆಸಿದ ಒಟ್ಟು ಮನೆಗಳ ವಿವರ :
1. ಕೇಂದ್ರ ನಗರ ಪಾಲಿಕೆ : 1,34,950
2. ಪೂರ್ವ ನಗರ ಪಾಲಿಕೆ : 1,53,107
3. ಉತ್ತರ ನಗರ ಪಾಲಿಕೆ : 2,59,148
4. ದಕ್ಷಿಣ ನಗರ ಪಾಲಿಕೆ : 1,83,110
5. ಪಶ್ಚಿಮ ನಗರ ಪಾಲಿಕೆ : 3,24,444
ನಾಗರಿಕರಲ್ಲಿ ಜಿಬಿಎ ವಿನಂತಿ:
ಸಮೀಕ್ಷಾದಾರರು ನಿಮ್ಮ ಮನೆಗಳಿಗೆ ಬರುವ ವೇಳೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಹಕರಿಸಲು ಮತ್ತು ಭಾಗವಹಿಸಲು ಎಲ್ಲಾ ನಾಗರಿಕರಲ್ಲಿ ವಿನಂತಿಸಿದೆ.
ನಾಗರಿಕರು ತಾವೇ ಸ್ವತಃ https://kscbcselfdeclaration.karnataka.gov.in/ ಈ ವೆಬ್ ಸೈಟ್ ಲಿಂಕ್ ಮೂಲಕ ಆನ್‌ಲೈನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.






















