ಬೆಂಗಳೂರು, ಅ.09 www.bengaluruwire.com : ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ವಿವಾದಕ್ಕೆ ತೆರೆ ಬಿದ್ದಿದ್ದು, ಎಲ್ಲಾ 17 ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಗೆ ಮರಳಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಯಿಂದ ಸೀಲ್ ಮಾಡಲಾಗಿದ್ದ ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಜಿಲ್ಲಾಡಳಿತ ತೆರೆದಿದ್ದು, ಚಿತ್ರೀಕರಣ ಪುನರಾರಂಭಗೊಂಡಿದೆ.

ನಡೆಯುವುದೇನು? ಎಲ್ಲಿಂದ ಎಲ್ಲಿಗೆ ಶಿಫ್ಟ್? :
ಸೀಸನ್ 12, ಸೆಪ್ಟೆಂಬರ್ 28 ರಂದು ನಟ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಅದ್ಧೂರಿಯಾಗಿ ಪ್ರಾರಂಭವಾಗಿತ್ತು. ಆದರೆ, ಕಾರ್ಯಕ್ರಮ ಶುರುವಾಗಿ ಒಂದು ವಾರದ ನಂತರ, ಅಕ್ಟೋಬರ್ 7 ರಂದು ಜಲ ಮಾಲಿನ್ಯ ಮತ್ತು ಅನಧಿಕೃತ ಕಾರ್ಯನಿರ್ವಹಣೆ ಆರೋಪಗಳ ಹಿನ್ನೆಲೆ ಕೆಎಸ್ ಪಿಸಿಬಿ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದಿದ್ದರು.

ತ್ಯಾಜ್ಯ ನೀರು ಬಿಡುಗಡೆ, ತ್ಯಾಜ್ಯ ಸಂಸ್ಕರಣಾ ಘಟಕ (STP) ದೋಷ ಮತ್ತು ಡೀಸೆಲ್ ಜನರೇಟರ್‌ಗಳ ಅನಧಿಕೃತ ಬಳಕೆಯಂತಹ ಪರಿಸರ ಉಲ್ಲಂಘನೆಗಳಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ, ಮನೆಯಿಂದ ಹೊರಬಂದ ಎಲ್ಲಾ ಸ್ಪರ್ಧಿಗಳನ್ನು ರಾಮನಗರದ ಈಗಲ್ಟನ್ ರೆಸಾರ್ಟ್‌ಗೆ ತಕ್ಷಣಕ್ಕೆ ಶಿಫ್ಟ್ ಮಾಡಲಾಗಿತ್ತು.
ಡಿಸಿಎಂ ಮಧ್ಯಸ್ಥಿಕೆ: ಸ್ಟುಡಿಯೋ ಬೀಗ ತೆರವು :
ಘಟನೆ ನಡೆದ ಮರುದಿನವೇ, ಅಂದರೆ ಬುಧವಾರ, ಉಪಮುಖ್ಯಮಂತ್ರಿ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಸ್ಟುಡಿಯೋ ಬೀಗ ತೆರೆಯುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಇವರ ಸೂಚನೆಯ ಮೇರೆಗೆ, ಬುಧವಾರ ಮುಂಜಾನೆ 4 ಗಂಟೆಗೆ, ರಾಮನಗರ ತಾಲೂಕಿನ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ನಿಂದ ಎಲ್ಲಾ 17 ಸ್ಪರ್ಧಿಗಳನ್ನು ಜಾಲಿವುಡ್ ಸ್ಟುಡಿಯೋಗೆ ಮರಳಿ ಶಿಫ್ಟ್ ಮಾಡಲಾಗಿದೆ.
ಯಾವುದೇ ಸಾರ್ವಜನಿಕರಿಗೆ ಕಾಣದಂತೆ ಸ್ಪರ್ಧಿಗಳನ್ನು ಕರೆತರಲು ಕಾರ್‌ಗಳ ಗಾಜಿಗೆ ಕಪ್ಪು ಬಟ್ಟೆ ಸುತ್ತಿ ಕರೆತರಲಾಗಿದ್ದು, ಬಿಗ್ ಬಾಸ್ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರ ಸಮ್ಮುಖದಲ್ಲಿ ಸ್ಟುಡಿಯೋದ ಗೇಟ್ ‘ಸಿ’ ಅನ್ನು ತೆರೆಯಲಾಗಿದ್ದು, ಅಲ್ಲಿಂದಲೇ ಬಿಗ್ ಬಾಸ್ ಮನೆಗೆ ಸಂಪರ್ಕ ಕಲ್ಪಿಸಲಾಗಿದೆ.
ಕಿಚ್ಚ ಸುದೀಪ್ ಕಡೆಯಿಂದ ಧನ್ಯವಾದ :

ಸಮಸ್ಯೆ ಇತ್ಯರ್ಥವಾಗಿ, ಚಿತ್ರೀಕರಣ ಮರು ಆರಂಭಕ್ಕೆ ಅವಕಾಶ ದೊರೆತ ನಂತರ, ನಟ ಮತ್ತು ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. “ತಮ್ಮ ಮನವಿಯನ್ನು ಪರಿಗಣಿಸಿ ಜಾಲಿವುಡ್ ಸ್ಟುಡಿಯೋ ತೆರೆಯಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಹಾಗೂ ಇತ್ತೀಚೆಗೆ ನಡೆದ ಈ ಸಮಸ್ಯೆಗೆ ಬಿಗ್ ಬಾಸ್ ಶೋ ಕಾರಣವಲ್ಲ ಎಂಬುದನ್ನು ಮನಗಂಡಿದ್ದಕ್ಕಾಗಿ” ಎಂದು ಅವರು ಡಿಸಿಎಂ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳೊಂದಿಗೆ, ಬಿಗ್ ಬಾಸ್ ಕನ್ನಡ 12 ರ ಚಿತ್ರೀಕರಣ ಪುನರಾರಂಭಗೊಂಡಿದ್ದು, ಸ್ಪರ್ಧಿಗಳ ಮುಂದಿನ ಪಯಣ ಎಂದಿನಂತೆ ಮುಂದುವರಿಯಲಿದೆ.






















