ಮುಂಬೈ/ಬೆಂಗಳೂರು, ಅ.08 www.bengaluruwire.com : ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ (Digital Payment) ಇಂದಿನಿಂದ ಪ್ರಮುಖ ಬದಲಾವಣೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ ಹೊಸ ಮಾರ್ಗಸೂಚಿಯ ಅಡಿಯಲ್ಲಿ, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಕೆದಾರರು ಇನ್ಮುಂದೆ ಪ್ರತಿ ವಹಿವಾಟಿಗೆ ಕಡ್ಡಾಯವಾಗಿ ಪಿನ್ (PIN) ನಮೂದಿಸುವ ಕಿರಿಕಿರಿಯಿಂದ ಮುಕ್ತರಾಗಿದ್ದಾರೆ.
ಬದಲಿಗೆ, ಆಧಾರ್-ಆಧಾರಿತ ಮುಖ ಚಹರೆ (Face Scan) ಅಥವಾ ಫಿಂಗರ್‌ಪ್ರಿಂಟ್ ಸ್ಕ್ಯಾನ್ (Fingerprint Scan) ಬಳಸಿ ಪಾವತಿಗಳನ್ನು ಕ್ಷಣಾರ್ಧದಲ್ಲಿ ಅನುಮೋದಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಇಂದಿನಿಂದ (ಅ. 08) ದೇಶಾದ್ಯಂತ ಜಾರಿಗೆ ಬಂದಿದೆ.
ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಘೋಷಣೆ :
ಮುಂಬೈನಲ್ಲಿ ನಡೆಯುತ್ತಿರುವ ‘ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2025’ (Global Fintech Fest 2025) ನಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ಆರ್‌ಬಿಐ ಜಂಟಿಯಾಗಿ ಈ ಮಹತ್ವದ ಬದಲಾವಣೆಯನ್ನು ಮಂಗಳವಾರ ಘೋಷಿಸಿವೆ.

ಹೆಚ್ಚಿದ ಭದ್ರತೆ, ಸುಲಲಿತ ವಹಿವಾಟು :
ಟ್ರಾನ್ಸಾಕ್ಷನ್ಗಳ ದೃಢೀಕರಣ (Verification) ಪ್ರಕ್ರಿಯೆಯಲ್ಲಿ ಇನ್ನಷ್ಟು ಸುರಕ್ಷತೆ ಮತ್ತು ವೇಗವನ್ನು ತರುವ ಉದ್ದೇಶದಿಂದ ಆರ್‌ಬಿಐ ಈ ಹೊಸ ನಿಯಮಗಳನ್ನು ಹೊರಡಿಸಿದೆ. ಬ್ಯಾಂಕುಗಳು ಮತ್ತು ಫಿನ್‌ಟೆಕ್ ಕಂಪನಿಗಳು ಸಾಂಪ್ರದಾಯಿಕ ಪಿನ್ ವ್ಯವಸ್ಥೆಯ ಜೊತೆಗೆ ಬಯೋಮೆಟ್ರಿಕ್ ಅಥವಾ ಮುಖ ಆಧಾರಿತ ದೃಢೀಕರಣವನ್ನು ಅಳವಡಿಸಿಕೊಳ್ಳಲು ಈ ಮಾರ್ಗಸೂಚಿಗಳು ಅನುಮತಿ ನೀಡುತ್ತವೆ. ಈ ಕ್ರಮವು ಡಿಜಿಟಲ್ ಪಾವತಿಗಳ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಿ, ವಂಚನೆಯ ಅಪಾಯವನ್ನು ಕಡಿಮೆ ಮಾಡಲಿದೆ ಎಂದು ಆರ್ ಬಿಐ ಹೇಳಿದೆ.

ಕಾರ್ಯನಿರ್ವಹಣೆ ಹೇಗಾಗುತ್ತೆ? :
ಹೊಸ ವೈಶಿಷ್ಟ್ಯದ ಅಡಿಯಲ್ಲಿ, ಬಳಕೆದಾರರು ಯುಪಿಐ ಪಾವತಿ ಮಾಡಲು ಮುಂದಾದಾಗ ಅವರ ಫೋನ್‌ನಲ್ಲಿರುವ ಕ್ಯಾಮೆರಾ ಅಥವಾ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಕ್ರಿಯಗೊಳ್ಳುತ್ತದೆ. ಮುಖ ಅಥವಾ ಬೆರಳಚ್ಚನ್ನು ಸ್ಕ್ಯಾನ್ ಮಾಡಿದ ತಕ್ಷಣ, ಆ ಡೇಟಾವನ್ನು ‘ಆಧಾರ್ ಡೇಟಾಬೇಸ್’ನೊಂದಿಗೆ ಹೊಂದಿಸಲಾಗುತ್ತದೆ. ಹೊಂದಾಣಿಕೆ ಯಶಸ್ವಿಯಾದರೆ, ಪಾವತಿ ಕೆಲವೇ ಸೆಕೆಂಡುಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಈ ಅಸಾಮಾನ್ಯ ಸೌಲಭ್ಯವು ಬ್ಯಾಂಕ್ ಖಾತೆ ಮತ್ತು ಯುಪಿಐ ಐಡಿಯನ್ನು ತಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿರುವ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ.
ಈವರೆಗೆ ಪ್ರತಿ ಯುಪಿಐ ವಹಿವಾಟಿಗೂ 4 ಅಥವಾ 6 ಡಿಜಿಟ್‌ಗಳ ಪಿನ್ ನಮೂದಿಸಬೇಕಿತ್ತು. ಈಗ ಈ ಬಯೋಮೆಟ್ರಿಕ್ ದೃಢೀಕರಣವು ವಹಿವಾಟಿನ ಸಮಯವನ್ನು ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಗೆ ಇಳಿಸಿದೆ.
ವಂಚನೆ ತಡೆಯಲು ಇದು ಪರಿಣಾಮಕಾರಿ ಕ್ರಮ :
ಫಿನ್‌ಟೆಕ್ ತಜ್ಞರ ಪ್ರಕಾರ, ಬಯೋಮೆಟ್ರಿಕ್ ಡೇಟಾವನ್ನು ನಕಲಿಸುವುದು ಅಸಾಧ್ಯ. ಇದು ಯುಪಿಐ ವಹಿವಾಟುಗಳಲ್ಲಿ ಆಗಬಹುದಾದ ವಂಚನೆಯ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಬಳಕೆದಾರರ ಡೇಟಾ ಗೌಪ್ಯತೆ ಮತ್ತು ಸುರಕ್ಷತೆಗಾಗಿ, ಎನ್ ಪಿಸಿಐ ಮತ್ತು ಆಧಾರ್ (UIDAI) ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮತ್ತು ಹಲವು ಕಟ್ಟುನಿಟ್ಟಿನ ಪ್ರೋಟೋಕಾಲ್‌ಗಳನ್ನು ಜಾರಿಗೆ ತಂದಿವೆ. ಇದರಿಂದ ಬಯೋಮೆಟ್ರಿಕ್ ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಖಚಿತಪಡಿಸಲಾಗಿದೆ.
ವೇರಬಲ್ ಡಿವೈಸ್ಗಳಿಗೂ ಯುಪಿಐ ಲೈಟ್:
ಇದೇ ಸಂದರ್ಭದಲ್ಲಿ, ಎನ್ ಪಿಸಿಐ ಮತ್ತು ಆರ್‌ಬಿಐ ಮತ್ತೊಂದು ಮಹತ್ವದ ಉಪಕ್ರಮವನ್ನು ಸಹ ಪ್ರಕಟಿಸಿವೆ. ಕಡಿಮೆ ಮೊತ್ತದ ವಹಿವಾಟುಗಳನ್ನು (Small-value transactions) ಸಂಪೂರ್ಣವಾಗಿ ಹ್ಯಾಂಡ್ಸ್-ಫ್ರೀ (Hands-free) ಆಗಿ ಮಾಡಲು ಸಹಾಯಕವಾಗುವಂತೆ ‘ವೇರಬಲ್ ಸ್ಮಾರ್ಟ್ ಗ್ಲಾಸ್ಗಳಿಗಾಗಿ’ (Wearable Smart Glasses) ‘ಯುಪಿಐ ಲೈಟ್’ (UPI Lite) ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಬಳಕೆದಾರರು ಕೇವಲ ಧ್ವನಿ ಆಜ್ಞೆಯ ಮೂಲಕವೇ ಪಾವತಿಗಳನ್ನು ಅನುಮೋದಿಸಿ ಪೂರ್ಣಗೊಳಿಸಬಹುದು. QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಫೋನ್, ಪಿನ್ ಅಥವಾ ಸ್ಪರ್ಶದ ಅಗತ್ಯವಿಲ್ಲದೆ ವಹಿವಾಟು ಮಾಡಬಹುದಾಗಿದೆ.






















