ಬೆಂಗಳೂರು, ಅ.08 www.bengaluruwire.com : ಬೆಂಗಳೂರು ವಿಶ್ವವಿದ್ಯಾಲಯದ (ಬೆಂವಿವಿ) 60ನೇ ಘಟಿಕೋತ್ಸವದಲ್ಲಿ 30,300 ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿದ್ದು, 157 ವಿದ್ಯಾರ್ಥಿಗಳು 298 ಚಿನ್ನದ ಪದಕಗಳನ್ನು ಸ್ವೀಕರಿಸಿದರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯರು ಮತ್ತು ಸಮಾಜ ಸೇವಕ ಡಿ. ಮಾದೇಗೌಡ ಮತ್ತು ಜೆ.ಪಿ. ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಬಿ.ಪ್ರಸನ್ನ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ಅನುಪಸ್ಥಿತರಾಗಿದ್ದರು ಎಂದು ಬೆಂಗಳೂರು ವಿವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅತಿ ಹೆಚ್ಚು ಚಿನ್ನದ ಪದಕ ವಿಜೇತರು:

ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಪ್ರೇಮ. ಎಸ್ ಅವರು ಒಟ್ಟು 11 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಪದಕ ಗಳಿಸಿದ ವಿದ್ಯಾರ್ಥಿ ಎನಿಸಿಕೊಂಡರು. ಸ್ನಾತಕ ಪದವಿ ವಿಭಾಗದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಹೇಮಂತ. ಎಸ್ ಅವರು ಒಟ್ಟು 7 ಚಿನ್ನದ ಪದಕಗಳನ್ನು ಸ್ವೀಕರಿಸಿದರು.
ಘಟಿಕೋತ್ಸವದಲ್ಲಿ ಚಿನ್ನದ ಪದಕಗಳ ಜೊತೆಗೆ 61 ವಿದ್ಯಾರ್ಥಿಗಳು 132 ನಗದು ಪ್ರಶಸ್ತಿಗಳನ್ನು ಸಹ ಪಡೆದರು. ಒಟ್ಟು 140 ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಸ್ವೀಕರಿಸಿದರು.
ವಿಶೇಷ ಪ್ರಶಸ್ತಿ ವಿಜೇತರು:
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಾದ ದಿವ್ಯ. ಎಸ್, ಮಾನಸ. ಕೆ. ಜಿ, ನಂದಿನಿ ಡಿ.ಹೆಚ್, ಚೇತನ. ಆರ್, ಭರತ್ ಕುಮಾರ್.ಎಸ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಚಿನ್ನದ ಪದಕಕ್ಕೆ ಭಾಜನರಾದರು. ಸ್ವರೂಪ್.ಎನ್ ಮತ್ತು ರಂಜಿತ ಜಾದವ್ ಅವರು 2023-24ನೇ ಸಾಲಿನ ವರ್ಷದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಸ್ವೀಕರಿಸಿದರು.
ಹಲವು ಗಣ್ಯರ ಉಪಸ್ಥಿತಿ:
ಘಟಿಕೋತ್ಸವದ ಅಧ್ಯಕ್ಷತೆಯನ್ನು ಕುಲಾಧಿಪತಿಗಳು ವಹಿಸಿದ್ದು, ಡಿ.ಆರ್.ಡಿ.ಎಲ್.ನ ನಿವೃತ್ತ ನಿರ್ದೇಶಕ ಹಾಗೂ ಪದ್ಮಶ್ರೀ ಪುರಸ್ಕೃತ ಡಾ.ಪ್ರಹ್ಲಾದ ರಾಮರಾವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದರು. ರಾಜ್ಯ ಉನ್ನತ ಶಿಕ್ಷಣ ಸಚಿವರು ಮತ್ತು ಸಹ ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ, ಕುಲಸಚಿವರು ಕೆ.ಟಿ. ಶಾಂತಲಾ ಕೆ.ಎ.ಎಸ್., ಕುಲಸಚಿವರು ಮೌಲ್ಯಮಾಪನ ಪ್ರೊ.ಸಿ.ಎಸ್.ಕರಿಗಾರ್ ಸೇರಿದಂತೆ ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿಭಾಗ ಮುಖ್ಯಸ್ಥರು,ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.






















