ಹೈದರಾಬಾದ್, ಅ.04 www.bengaluruwire.com : ದಕ್ಷಿಣ ಭಾರತದ ಮೋಸ್ಟ್ ಹ್ಯಾಪನಿಂಗ್ ಜೋಡಿ ಎಂದರೆ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಎಂದೇ ಹೇಳಬಹುದು. ತೆರೆ ಮೇಲೆ ಹಿಟ್ ಆದ ಇವರ ಕೆಮಿಸ್ಟ್ರಿ, ನಿಜ ಜೀವನದಲ್ಲಿಯೂ ಗಾಢವಾಗಿದೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿರುವ ಸಂಗತಿ.
ಇದೀಗ ಈ ತಾರಾ ಜೋಡಿಯ ಕುರಿತು ಸಿನಿ ಜಗತ್ತಿನಲ್ಲಿ ಒಂದು ಹೊಸ ಸುದ್ದಿ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಹೌದು, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅಕ್ಟೋಬರ್ 3 ರಂದು ಶುಭ ಸಮಾರಂಭ? :
ವರದಿಗಳ ಪ್ರಕಾರ, ಅಕ್ಟೋಬರ್ 3ರಂದು ಈ ಜೋಡಿಯ ನಿಶ್ಚಿತಾರ್ಥದ ಸಮಾರಂಭ ನಡೆದಿದೆ. ಈ ವಿಷಯವನ್ನು ತೀರಾ ರಹಸ್ಯವಾಗಿ ಇಡಲಾಗಿದ್ದು, ಕೇವಲ ಕುಟುಂಬ ಸದಸ್ಯರು ಮತ್ತು ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿಯೇ ಈ ಶುಭಕಾರ್ಯ ನೆರವೇರಿದೆ ಎನ್ನಲಾಗಿದೆ. ಈ ಕಾರಣದಿಂದಲೇ ಯಾವುದೇ ಫೋಟೋ ಅಥವಾ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿಲ್ಲ. ಆದರೆ, ಸಿನಿಮಾ ವಲಯದಲ್ಲಿ ಈ ಕುರಿತು ಗುಸುಗುಸು ಶುರುವಾಗಿದ್ದು, ಶೀಘ್ರದಲ್ಲಿಯೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಈ ಸಿನಿ ಕಲಾವಿದ ಜೋಡಿಯ ಮದುವೆ ಫೆಬ್ರವರಿಯಲ್ಲಿ? :
ನಿಶ್ಚಿತಾರ್ಥದ ಜೊತೆಯಲ್ಲೇ ಈ ಜೋಡಿ ಮದುವೆ ದಿನಾಂಕವನ್ನೂ ನಿಗದಿ ಪಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವು ಮೂಲಗಳ ಪ್ರಕಾರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದು ಸೆಲೆಬ್ರಿಟಿಗಳ ಮದುವೆಯಾಗಿರುವುದರಿಂದ, ಸಮಾರಂಭವನ್ನು ಅತ್ಯಂತ ಅದ್ದೂರಿಯಾಗಿ ನೆರವೇರಿಸುವ ಯೋಜನೆ ಇದೆ.
ಸಿನಿಮಾದಿಂದ ಶುರುವಾದ ಪ್ರೇಮ ಪಯಣ :
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಬಾಂಧವ್ಯಕ್ಕೆ ನಾಂದಿ ಹಾಡಿದ್ದು 2018ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ‘ಗೀತ ಗೋವಿಂದಂ’. ಈ ಸಿನಿಮಾದಲ್ಲಿ ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಅಂದಿನಿಂದ ಈ ಜೋಡಿ ಹಲವು ಬಾರಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ. ವಿದೇಶಿ ವಿಹಾರಗಳ ಫೋಟೋಗಳು ಸಹ ಇವರು ಜೊತೆಯಲ್ಲಿದ್ದಾರೆ ಎಂದು ಸೂಚಿಸಿದ್ದವು. ಆದಾಗ್ಯೂ, ತಮ್ಮ ಸಂಬಂಧದ ಕುರಿತು ಇವರಿಬ್ಬರೂ ಇದುವರೆಗೂ ಎಲ್ಲಿಯೂ ಬಹಿರಂಗ ಹೇಳಿಕೆ ನೀಡಿಲ್ಲ. ರಶ್ಮಿಕಾ ಮಂದಣ್ಣ ಅವರು ಈ ಹಿಂದೆ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ನಂತರ ಅದನ್ನು ಮುರಿದುಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಸದ್ಯ ರಶ್ಮಿಕಾ ಮಂದಣ್ಣ ಅವರು ‘ಥಮ’ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದರೆ, ವಿಜಯ್ ದೇವರಕೊಂಡ ಅವರ ‘ಕಿಂಗ್‌ಡಮ್’ ಇತ್ತೀಚೆಗೆ ದೊಡ್ಡ ಯಶಸ್ಸು ಕಂಡಿದೆ. ತಮ್ಮ ವೃತ್ತಿಜೀವನದ ಜೊತೆಜೊತೆಗೇ ವೈಯಕ್ತಿಕ ಜೀವನದ ಈ ಹೊಸ ಪಯಣದ ಬಗ್ಗೆ ಈ ಜೋಡಿ ಯಾವಾಗ ಅಧಿಕೃತವಾಗಿ ಘೋಷಣೆ ಮಾಡುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.






















