ಬೆಂಗಳೂರು, ಅ.03 www.bengaluruwire.com : ದಸರಾ ಹಬ್ಬ ಸಂಭ್ರಮ ಮುಗಿಸಿ ಮನೆಯಲ್ಲಿ ಮಲಗಿದ್ದವರಿಗೆ ಅಗ್ನಿ ಆಕಸ್ಮಿಕದಿಂದ ದುರಂತ ಸಂಭವಿಸಿ ದಿಕ್ಕೇ ತೋಚದಂತಾಗಿದೆ.
ನಗರದ ಉಳ್ಳಾಲದ ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ 6ನೇ ಬ್ಲಾಕ್ ನಲ್ಲಿ ಇಂದು ಮುಂಜಾನೆ ಸುಮಾರು 4 ಗಂಟೆಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಸಣ್ಣ ವೈದ್ಯಕೀಯ ಮಳಿಗೆಯ ಮಾಲೀಕನೊಬ್ಬರ ಮನೆಯಲ್ಲಿ ಅಗ್ನಿ ಆಕಸ್ಮಿಕದ ಮನೆಯ ಒಂದು ಮಹಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಫ್ರಿಡ್ಜ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯ ಮೊದಲ ಮಹಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸಕಾಲದಲ್ಲಿ ಎಚ್ಚೆತ್ತ ಮನೆ ಮಾಲೀಕ ಬಾಲಾಜಿ ಅವರು ಎರಡನೇ ಮಹಡಿಯಲ್ಲಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇವಲ ಮೂರು ವರ್ಷಗಳ ಹಿಂದೆ, ತಮ್ಮ ಸ್ವಂತ ದುಡಿಮೆ ಮತ್ತು ಕೈ ಸಾಲದ ನೆರವಿನಿಂದ ಒಂದು ಮೂಲೆ ನಿವೇಶನವನ್ನು ಖರೀದಿಸಿ, ಕನಸಿನ ಮನೆ ಕಟ್ಟಿದ್ದ ಬಾಲಾಜಿ ಅವರಿಗೆ ಈ ಘಟನೆ ಬರಸಿಡಿಲಿನಂತೆ ಬಂದೆರಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಾಗ, ಆ ದಟ್ಟ ಹೊಗೆ ಮತ್ತು ಬೆಂಕಿಯ ಜ್ವಾಲೆ ವೇಗವಾಗಿ ಮೊದಲ ಮಹಡಿಯನ್ನು ಆವರಿಸಿಕೊಂಡಿದೆ. ಪ್ರಾಣ ಉಳಿದರೆ ಸಾಕೆಂದು ಮೇಲಿನ ಮಹಡಿಯಲ್ಲಿದ್ದ ಬಾಲಾಜಿ ಕೆಳಗಿಳಿಯಲು ಸಾಧ್ಯವಾಗದೆ, ತಮ್ಮ ಕಣ್ಣೆದುರೇ, ಕಟ್ಟಿದ ಮನೆಯು ನಾಶವಾಗುವುದನ್ನು ನೋಡುವಂತಾಯಿತು.

ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರಾದರೂ, ಮೊದಲ ಮಹಡಿ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಎರಡನೇ ಮಹಡಿಗೂ ಹಾನಿಯಾಗಿದೆ. ಅನಿರೀಕ್ಷಿತ ದುರಂತದಲ್ಲಿ ಮನೆಗೆ ಹಾನಿಯಾಗಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಕೊಂಚ ಸಮಾಧಾನಕರ ವಿಷಯ.
ಸ್ವಂತ ದುಡಿಮೆ ಹಾಗೂ ಕೈಸಾಲ ಮಾಡಿ ಮನೆಯನ್ನು ಕಟ್ಟಿದ ಬಾಲಾಜಿ ಅವರಿಗೆ ಈ ದುರಂತವು ದೊಡ್ಡ ಆಘಾತ ನೀಡಿದ್ದು, ಬದುಕಿನಲ್ಲಿ ಶೂನ್ಯ ಆವರಿಸಿದಂತಾಗಿದೆ.






















