ಬೆಂಗಳೂರು, ಅ.02 www.bengaluruwire.com : ಕನಕಪುರ ರಸ್ತೆಯ ಸಮೀಪದಲ್ಲಿರುವ ತುರಹಳ್ಳಿ ಅರಣ್ಯದಲ್ಲಿ ಮತ್ತೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಅದರೊಂದಿಗೆ ಎರಡು ಮರಿಗಳು ಸಹ ಕಾಣಿಸಿಕೊಂಡಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭಯಭೀತಿಗೆ ಕಾರಣವಾಗಿದೆ.
ಸೆಪ್ಟೆಂಬರ್ 30ರಂದು (ಎರಡು ದಿನಗಳ ಹಿಂದೆ) 597 ಎಕರೆ ವಿಸ್ತೀರ್ಣದ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ತಾಯಿ ಚಿರತೆ ತನ್ನ ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿದೆ. ಇಂದು (ಅಕ್ಟೋಬರ್ ೦2) ಬೆಳಗ್ಗೆ ಗುಡ್ಡದ ತುದಿಯ ಮೇಲೆ ತಾಯಿ ಚಿರತೆ ಸೂರ್ಯೋದಯವನ್ನು ಸ್ವಾಗತಿಸುತ್ತಿರುವಂತೆ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣವಾದ ‘ಎಕ್ಸ್’ (X) ಖಾತೆಯಲ್ಲಿ ಹಂಚಿಕೆಯಾಗಿದ್ದು, ಈ ವಿಷಯ ಮತ್ತಷ್ಟು ಪ್ರಚಾರಕ್ಕೆ ಬಂದಿದೆ.
ಸುತ್ತಮುತ್ತಲಿನ ಜನರಲ್ಲಿ ಆತಂಕ :
ತುರಹಳ್ಳಿ ಅರಣ್ಯ ಪ್ರದೇಶವು ಬಿಎಂ ಕಾವಲ್ ಮೀಸಲು ಅರಣ್ಯದಿಂದ ಕೇವಲ 1 ಕಿ.ಮೀ. ಮತ್ತು ಯುಎಂ ಕಾವಲ್ ಮೀಸಲು ಅರಣ್ಯದಿಂದ 2 ಕಿ.ಮೀ. ದೂರದಲ್ಲಿದ್ದು, ಚಿರತೆಗಳ ಓಡಾಟ ಸಹಜವಾಗಿದೆ. ಆದರೆ, ಅರಣ್ಯದ ಸುತ್ತಮುತ್ತಲಿನಲ್ಲಿ ಮನೆಗಳು, ಅಪಾರ್ಟ್‌ಮೆಂಟ್‌ಗಳು ಹೆಚ್ಚಾಗಿ ನಿರ್ಮಾಣವಾಗಿರುವುದರಿಂದ ಮತ್ತು ಹಲವು ಕಡೆ ಅರಣ್ಯ ಭೂಮಿ ಒತ್ತುವರಿಯಾಗಿರುವುದರಿಂದ ವನ್ಯಜೀವಿಗಳ ವ್ಯಾಪ್ತಿ ಕಿರಿದಾಗಿದೆ. ಇದರಿಂದಾಗಿ ಚಿರತೆಗಳು ಜನವಸತಿ ಪ್ರದೇಶದತ್ತ ಬರಲು ಪ್ರೇರಣೆ ನೀಡಿದಂತಾಗಿದೆ ಎಂದು ಪರಿಸರವಾದಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಅಧಿಕಾರಿಗಳ ನಿಷ್ಕ್ರಿಯತೆ ಬಗ್ಗೆ ಆಕ್ರೋಶ :
ಕಳೆದ ವರ್ಷ ನವೆಂಬರ್ 26 ಮತ್ತು ಡಿಸೆಂಬರ್‌ನಲ್ಲಿ ಎರಡೆರಡು ಬಾರಿ ಚಿರತೆ ಪ್ರತ್ಯಕ್ಷವಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ಚಿರತೆಯ ಓಡಾಟದ ವಿಡಿಯೋ ಹಾಗೂ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಂದೂ ಸಹ ಸ್ಥಳೀಯರು ಚಿರತೆ ಸೆರೆಗೆ ಮತ್ತು ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಅರಣ್ಯ ಇಲಾಖೆಯು ಆಗಾಗ ಹೇಳಿಕೆಗಳನ್ನು ನೀಡುತ್ತದೆಯೇ ಹೊರತು, ಸೂಕ್ತ ಮತ್ತು ಶಾಶ್ವತ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಯಾಮೆರಾ ಟ್ರ್ಯಾಪ್ ಚಿಂತನೆ :
ತುರಹಳ್ಳಿ ಅರಣ್ಯದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿದೆಯೇ ಎಂಬುದನ್ನು ಪತ್ತೆಹಚ್ಚಲು ಕ್ಯಾಮೆರಾ ಟ್ರ್ಯಾಪ್ ಅಳವಡಿಸುವ ಬಗ್ಗೆ ಚಿಂತನೆಗಳು ನಡೆದಿವೆ ಎಂದು ಈ ಹಿಂದೆ ಅಧಿಕಾರಿಗಳು ತಿಳಿಸಿದ್ದರು. ಸದ್ಯ ಅರಣ್ಯದ ಸುತ್ತಮುತ್ತ ಚಿರತೆ ಇರುವ ಬಗ್ಗೆ ಎಚ್ಚರಿಕೆಯ ಬೋರ್ಡ್‌ಗಳನ್ನು ಹಾಕಲಾಗಿದೆ. ಈ ಅರಣ್ಯ ಪ್ರದೇಶವು ಕಾಡುಹಂದಿಗಳು, ಮಚ್ಚೆಯುಳ್ಳ ಜಿಂಕೆಗಳು ಮತ್ತು ಇತರೆ ಸಣ್ಣ ಪ್ರಾಣಿಗಳು ಮತ್ತು ಪಕ್ಷಿ ಪ್ರಭೇದಗಳ ನೆಲೆಯಾಗಿದೆ. 2021ರಲ್ಲಿ ಈ ಅರಣ್ಯವನ್ನು ಟ್ರೀ ಪಾರ್ಕ್ ಆಗಿ ಪರಿವರ್ತಿಸುವ ಸರ್ಕಾರದ ಪ್ರಸ್ತಾವನೆಯನ್ನು ವನ್ಯಜೀವಿ ಸಂರಕ್ಷಕರು ಮತ್ತು ಸ್ಥಳೀಯರ ವಿರೋಧದಿಂದ ಕೈಬಿಡಲಾಗಿತ್ತು.
ತಾಯಿ ಚಿರತೆ, ಮರಿಗಳೊಂದಿಗೆ : ಕಾಣಿಸಿಕೊಂಡಿರುವುದರಿಂದ, ಇದು ಹೆಚ್ಚಿನ ಸುರಕ್ಷತೆ ಮತ್ತು ಜಾಗರೂಕತೆಯನ್ನು ಬೇಡುತ್ತಿದೆ. ಅರಣ್ಯ ಇಲಾಖೆ ಕೂಡಲೇ ಸೂಕ್ತ ಕಾರ್ಯಾಚರಣೆ ನಡೆಸಿ, ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






















