ನವದೆಹಲಿ, ಅ.02 www.bengaluruwire.com : ಕೇಂದ್ರ ಸರ್ಕಾರವು ದಸರಾ ಮತ್ತು ದೀಪಾವಳಿ ಹಬ್ಬಗಳ ಹಿನ್ನೆಲೆಯಲ್ಲಿ ದೇಶದ ಎಲ್ಲಾ 28 ರಾಜ್ಯಗಳಿಗೂ ಹೆಚ್ಚುವರಿ ತೆರಿಗೆ ಹಂಚಿಕೆಯ ಉಡುಗೊರೆ ನೀಡಿದೆ.
ಇದರನ್ವಯ, ರಾಜ್ಯಗಳ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳಿಗೆ ಉತ್ತೇಜನ ನೀಡಲು ಒಟ್ಟಾರೆ ₹1,01,603 ಕೋಟಿ ಹಣವನ್ನು ಮುಂಗಡ ಕಂತಿನ ರೂಪದಲ್ಲಿ ಬಿಡುಗಡೆ ಮಾಡಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕಕ್ಕೆ ಹೆಚ್ಚುವರಿ ತೆರಿಗೆ ಪಾಲು ₹3705 ಕೋಟಿ:

ಈ ಹೆಚ್ಚುವರಿ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ₹3705 ಕೋಟಿ ಮೊತ್ತವು ದೊರೆತಿದೆ. ಈ ಮೊತ್ತವು ಅಕ್ಟೋಬರ್ 10 ರಂದು ಬಿಡುಗಡೆ ಆಗಬೇಕಾದ ಸಾಮಾನ್ಯ ಮಾಸಿಕ ಹಂಚಿಕೆಯ ಜೊತೆಗೇ ಸೇರ್ಪಡೆಗೊಂಡು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ. ರಾಜ್ಯ ಸರ್ಕಾರಗಳು ಈ ಹಣವನ್ನು ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಚಿವ ಜೋಶಿ ಸಲಹೆ ನೀಡಿದ್ದಾರೆ.
ಈ ಹಿಂದೆ ‘Next Gen GST’ ಕೊಡುಗೆ ನೀಡಿದ್ದ ಬೆನ್ನಲ್ಲೇ ಈ ಹೆಚ್ಚುವರಿ ತೆರಿಗೆ ಹಂಚಿಕೆ ಮಾಡಿರುವುದು ರಾಜ್ಯಗಳ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ರೈತರಿಗೆ ಬೆಂಬಲ ಬೆಲೆ ನೆರವನ್ನು ತಲುಪಿಸಿ:
ಈ ಸಂದರ್ಭದಲ್ಲಿ ರಾಜ್ಯದ ರೈತರ ಸಂಕಷ್ಟದ ಬಗ್ಗೆಯೂ ಪ್ರಸ್ತಾಪಿಸಿದ ಪ್ರಲ್ಹಾದ ಜೋಶಿ ಅವರು, ಅತಿವೃಷ್ಟಿಯಿಂದಾಗಿ ತತ್ತರಿಸಿರುವ ರೈತರಿಗೆ ಕೇಂದ್ರ ಸರ್ಕಾರ ವಿವಿಧ ಬೆಳೆಗಳಿಗೆ ಘೋಷಿಸಿರುವ ಬೆಂಬಲ ಬೆಲೆಯ ನೆರವನ್ನು ರಾಜ್ಯ ಸರ್ಕಾರವು ಸಮರ್ಪಕವಾಗಿ ತಲುಪಿಸಬೇಕು ಎಂದು ಒತ್ತಾಯಿಸಿದ್ದಾರೆ.
* ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಮಳೆಯಿಂದಾಗಿ ರೈತರು ಬೆಳೆ ಹಾನಿಗೆ ಒಳಗಾಗಿದ್ದಾರೆ.
* ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ರೈತರಿಗಾಗಿಯೇ ಹೆಸರು, ಉದ್ದಿನಕಾಳು, ಸೋಯಾಬಿನ್, ಶೇಂಗಾ ಖರೀದಿಗೆ ಕೇಂದ್ರ ಸೂಚಿಸಿತ್ತು.
* ಇದೀಗ ಮುಂಬರುವ ಹಿಂಗಾರು ಹಂಗಾಮಿನ ಗೋಧಿ, ಕುಸುಬೆ, ಬಾರ್ಲಿ, ಮಸೂರ್, ಸಾಸಿವೆ, ಕಡಲೆ ಸೇರಿದಂತೆ ವಿವಿಧ ಧಾನ್ಯಗಳ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ.
ರಾಜ್ಯ ಸರ್ಕಾರ ಈ ಬೆಂಬಲ ಬೆಲೆಯ ಲಾಭವನ್ನು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಸರಿಯಾಗಿ ತಲುಪಿಸುವ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವರು ಸೂಚಿಸಿದ್ದಾರೆ.






















