ಬೆಂಗಳೂರು, ಸೆ.30 www.bengaluruwire.com : ನಗರಾಭಿವೃದ್ಧಿ ಇಲಾಖೆಯು (Urban Development Department – UDD) ಗ್ರೇಟರ್ ಬೆಂಗಳೂರು ಪ್ರದೇಶದ ಐದು ನೂತನ ನಗರ ಪಾಲಿಕೆಗಳ ಕರಡು ವಾರ್ಡ್ ವಾರು ಕ್ಷೇತ್ರ ಪುನರ್ವಿಂಗಡಣೆಯ ಅಧಿಸೂಚನೆಯನ್ನು ಮಂಗಳವಾರ (ಸೆಪ್ಟೆಂಬರ್ 30) ಪ್ರಕಟಿಸಿದೆ.
ಈ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿನ ಒಟ್ಟು 368 ವಾರ್ಡ್‌ಗಳಿಗೆ ಕರಡು ಗಡಿಗಳನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಮತ್ತು ನಾಗರಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಗ್ರೇಟರ್ ಬೆಂಗಳೂರು ರಚನೆಗೆ ಸಂಬಂಧಿಸಿದಂತೆ 2024ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿದ್ದುಪಡಿ ಕಾಯ್ದೆಯು ಅಂಗೀಕಾರಗೊಂಡ ಬಳಿಕ, ಈಗ ಕರಡು ವಾರ್ಡ್ ವಿಂಗಡಣೆಯನ್ನು ಪ್ರಕಟಿಸಲಾಗಿದೆ. ಈ ಮೂಲಕ ದೀರ್ಘಕಾಲದಿಂದ ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆಗೆ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ.
ಹೊಸ ವಾರ್ಡ್‌ಗಳ ವಿವರ ಹೀಗಿದೆ :

ನೂತನವಾಗಿ ರಚನೆಯಾಗಿರುವ ಐದು ನಗರ ಪಾಲಿಕೆಗಳ ವಾರ್ಡ್‌ಗಳ ಸಂಖ್ಯೆಯನ್ನು ಇಲಾಖೆ ಪ್ರಕಟಿಸಿದೆ. ಒಟ್ಟಾರೆಯಾಗಿ 368 ವಾರ್ಡ್‌ಗಳ ಪುನರ್ವಿಂಗಡಣೆ ಕರಡನ್ನು ಪ್ರಕಟಿಸಲಾಗಿದೆ.
ಐದು ನಗರ ಪಾಲಿಕೆಗಳ ಹೆಸರು ಹಾಗೂ ನಿಗದಿತ ವಾರ್ಡ್‌ಗಳ ಸಂಖ್ಯೆ ಈ ಕೆಳಕಂಡತಿದೆ :
ಬೆಂಗಳೂರು ಪಶ್ಚಿಮ ನಗರ ಪಾಲಿಕೆ : 111 ವಾರ್ಡ್‌ಗಳು ಬೆಂಗಳೂರು ಉತ್ತರ ನಗರ ಪಾಲಿಕೆ : 72 ವಾರ್ಡ್‌ಗಳು
ಬೆಂಗಳೂರು ದಕ್ಷಿಣ ನಗರ ಪಾಲಿಕೆ : 72 ವಾರ್ಡ್‌ಗಳು
ಬೆಂಗಳೂರು ಕೇಂದ್ರ ನಗರ ಪಾಲಿಕೆ : 63 ವಾರ್ಡ್‌ಗಳು ಬೆಂಗಳೂರು ಪೂರ್ವ ನಗರ ಪಾಲಿಕೆ : 50 ವಾರ್ಡ್‌ಗಳು
ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸುವ ವಿಧಾನ :
ಪುನರ್ವಿಂಗಡಣೆ ಕುರಿತು ಯಾವುದೇ ಸಲಹೆ, ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಅಂದರೆ, ಅಕ್ಟೋಬರ್ 15, 2025 ರ ಸಂಜೆ 5 ಗಂಟೆಯೊಳಗೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ಸಲಹೆ/ಆಕ್ಷೇಪಣೆಗಳನ್ನು ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ: 436, 4ನೇ ಮಹಡಿ, ವಿಕಾಸ ಸೌಧ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-560001 ಇವರ ವಿಳಾಸಕ್ಕೆ ಸಲ್ಲಿಸಬೇಕು. ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.
ಈ ಕರಡು ಅಧಿಸೂಚನೆಯು ಗ್ರೇಟರ್ ಬೆಂಗಳೂರು ಪ್ರದೇಶದ ಆಡಳಿತ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ನಾಗರಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇದೊಂದು ಅವಕಾಶವಾಗಿದೆ.






















