ಬೆಂಗಳೂರು, ಸೆ.30 www.bengaluruwire.com : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತನ್ನ ಬಿಲ್ಲಿಂಗ್ ತಂತ್ರಜ್ಞಾನದಲ್ಲಿ ಮಹತ್ವದ ಸುಧಾರಣೆಯನ್ನು ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ-ಬಿಬಿಎಂಪಿ) ವ್ಯಾಪ್ತಿಯ ಗ್ರಾಹಕರಿಗೆ ಒಂದು ತಿಂಗಳ ಮಟ್ಟಿಗೆ ವಿದ್ಯುತ್ ಬಿಲ್ ಪಾವತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದೆ.
ಸಾಫ್ಟ್‌ವೇರ್ ಉನ್ನತೀಕರಣದ ಕಾರ್ಯ ನಡೆಯುತ್ತಿರುವ ಕಾರಣ, ಅಕ್ಟೋಬರ್ ತಿಂಗಳಿನಲ್ಲಿ ಗ್ರಾಹಕರಿಗೆ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು ಪರಿಗಣಿಸಿ ಬಿಲ್ ವಿತರಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಮೀಟರ್ ಮಾಪನಕ್ಕೆ ಬರಲ್ಲ:
ಬೆಸ್ಕಾಂನ ಮಾಹಿತಿ ತಂತ್ರಜ್ಞಾನ ವಿಭಾಗವು ಕೈಗೊಂಡಿರುವ ಈ ಸಾಫ್ಟ್‌ವೇರ್ ಉನ್ನತೀಕರಣ ಕಾರ್ಯವು ಪ್ರಗತಿಯಲ್ಲಿದೆ. ಹೀಗಾಗಿ, ಅಕ್ಟೋಬರ್ 1 ರಿಂದ 15 ರವರೆಗಿನ ನಿಗದಿತ ಅವಧಿಯಲ್ಲಿ ಜಿಬಿಎ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮೀಟರ್ ರೀಡರ್‌ಗಳು ಮಾಪನ ಕಾರ್ಯಕ್ಕೆ ಬರುವುದಿಲ್ಲ. ಬದಲಿಗೆ, ಗ್ರಾಹಕರ ಕಳೆದ ಮೂರು ತಿಂಗಳ ಸರಾಸರಿ ಬಳಕೆಯ ಆಧಾರದ ಮೇಲೆ ಬಿಲ್ ತಯಾರಿಸಿ ವಿತರಿಸಲಾಗುತ್ತದೆ.

ಬಿಲ್ ಪಾವತಿ ವಿಧಾನ:
ಬಿಲ್ ಪಾವತಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಬೆಸ್ಕಾಂ ವ್ಯವಸ್ಥೆ ಮಾಡಿದ್ದು, ಗ್ರಾಹಕರು ಬೆಸ್ಕಾಂ ಮಿತ್ರ ಆ್ಯಪ್, ಉಪ ವಿಭಾಗ ಕೇಂದ್ರಗಳು ಮತ್ತು ಯುಪಿಐ ಆ್ಯಪ್‌ಗಳ ಮೂಲಕ ತಮ್ಮ ಸರಾಸರಿ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ.
ಗೃಹಜ್ಯೋತಿ ಯೋಜನೆಗೆ ಅನ್ವಯ:
ಈ ಪ್ರಕ್ರಿಯೆಯಿಂದಾಗಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಲಾಭ ಪಡೆಯುವಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಈ ತಾತ್ಕಾಲಿಕ ಸರಾಸರಿ ಬಿಲ್ಲಿಂಗ್ ವ್ಯವಸ್ಥೆಯು ಕೇವಲ ಸಾಫ್ಟ್‌ವೇರ್ ಉನ್ನತೀಕರಣದ ಕಾರಣಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.






















