ಬೆಂಗಳೂರು, ಸೆ.29 www.bengaluruwire.com : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ (KMDC) 2025-26ನೇ ಸಾಲಿನಲ್ಲಿ ವಿವಿಧ ಸಾಲ ಮತ್ತು ಸಹಾಯಧನ ಯೋಜನೆಗಳಿಗಾಗಿ ಅರ್ಹ ಮತೀಯ ಅಲ್ಪಸಂಖ್ಯಾತರಿಂದ (ಕ್ರಿಶ್ಚಿಯನ್ ಸಮುದಾಯ ಹೊರತುಪಡಿಸಿ) ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಮುಸ್ಲಿಂ, ಜೈನ, ಬೌದ್ಧ, ಸಿಖ್ಖರು ಹಾಗೂ ಪಾರ್ಸಿ ಜನಾಂಗದವರು ಈ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ. ನಿಗಮವು ಶ್ರಮ ಶಕ್ತಿ ಸಾಲ/ಸಹಾಯಧನ ಯೋಜನೆ, ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮ ಪ್ರೋತ್ಸಾಹ, ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಸಹಾಯಧನ, ವೃತ್ತಿ ಪ್ರೋತ್ಸಾಹ ಸಾಲ/ಸಹಾಯಧನ, ಸಾಂತ್ವನ ಯೋಜನೆ, ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಸಾಲ (Foreign Education Loan) ಮತ್ತು ವ್ಯಾಪಾರ/ಉದ್ದಿಮೆಗಳಿಗೆ ನೇರ ಸಾಲ ಯೋಜನೆಗಳಡಿ ಸೌಲಭ್ಯ ಒದಗಿಸುತ್ತಿದೆ.
ಅರ್ಹತಾ ಮಾನದಂಡಗಳು:
ಅರ್ಜಿದಾರರು ಕಡ್ಡಾಯವಾಗಿ ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು ಮತ್ತು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 15 ವರ್ಷದಿಂದ ಕಾಯಂ ನಿವಾಸಿಯಾಗಿರಬೇಕು. ಈ ಹಿಂದೆ ನಿಗಮದ ಯಾವುದೇ ಸೌಲಭ್ಯವನ್ನು ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಕೆ ವಿವರಗಳು:
ಆಸಕ್ತ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್‌ಸೈಟ್ https://kmdconline.karnataka.gov.in ಮೂಲಕ ಅಕ್ಟೋಬರ್ 16, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಆನ್‌ಲೈನ್ ಅರ್ಜಿಯ ಪ್ರತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಕ್ಟೋಬರ್ 10, 2025 ರೊಳಗಾಗಿ ನಿಗಮದ ಕಚೇರಿಗೆ ಸಲ್ಲಿಸುವುದು ಕಡ್ಡಾಯ.
ಹೆಚ್ಚಿನ ವಿವರಗಳಿಗಾಗಿ ಬೆಂಗಳೂರು ನಗರ ಜಿಲ್ಲೆ (ದಕ್ಷಿಣ ವಿಭಾಗ), KMDC ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಹಮೀದ್ ಷಾ ಕಾಂಪ್ಲೆಕ್ಸ್, 2ನೇ ಮಹಡಿ, ಕಬ್ಬನ್ ಪೇಟೆ ಮುಖ್ಯ ರಸ್ತೆ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ 080-22114817 ಅಥವಾ ಸಹಾಯವಾಣಿ 8277799990 (24×7) ನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.






















