ಬೆಂಗಳೂರು, ಸೆ. 25 www.bengaluruwire.com : ಕನ್ನಡದ ಹೆಮ್ಮೆಯ ನಟ, ವರನಟ ಡಾ. ರಾಜ್‌ಕುಮಾರ್ ಅವರ ಪುತ್ಥಳಿಯನ್ನು ಕೆಡವಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯಪ್ರವೃತ್ತವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಡಾ. ರಾಜ್ ಅಭಿಮಾನಿಗಳು ಮತ್ತು ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಒಂದು ವೇಳೆ ಪುತ್ಥಳಿಯನ್ನು ಉರುಳಿಸಲು ಪ್ರಯತ್ನಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ಸ್ಮಾರಕ ಧ್ವಂಸಕ್ಕೆ ಮತ್ತೆ ಯತ್ನ :

ಪದ್ಮನಾಭ ನಗರ ವಾರ್ಡ್‌ನ ಪುಟ್ಟಲಿಂಗಯ್ಯ ರಸ್ತೆಯ ಗಣೇಶ ದೇವಸ್ಥಾನದ ಮುಂಭಾಗದಲ್ಲಿರುವ ‘ರಾಜ್ ಕಟ್ಟೆ’ ಎಂಬಲ್ಲಿರುವ ಡಾ. ರಾಜ್ ಕುಮಾರ್ ಪುತ್ಥಳಿಯನ್ನು ತೆರವುಗೊಳಿಸಲು ಬಿಡಿಎ ಮುಂದಾಗಿದೆ ಎಂದು ಜನ ಸೇವಾ ಸಂಘ ಆರೋಪಿಸಿದೆ. ಇತ್ತೀಚೆಗೆ ದಿವಂಗತ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಉರುಳಿಸಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಮೇರುನಟನ ಪುತ್ಥಳಿಗೆ ಧಕ್ಕೆಯುಂಟು ಮಾಡಲು ಹೊರಟಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.


ಈ ಸಂಬಂಧ ಜನ ಸೇವಾ ಸಂಘವು ಗೃಹ ಸಚಿವರು ಮತ್ತು ಬಿಡಿಎ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಪುತ್ಥಳಿ ಇರುವ ಜಾಗದ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿದೆ.
ಸಿಎ ನಿವೇಶನ ವಿವಾದ, ನಕಲಿ ದಾಖಲೆಗಳ ಸೃಷ್ಟಿ? :
ಪುತ್ಥಳಿ ಇರುವ ಈ ಜಾಗವು ಸಾರ್ವಜನಿಕ ಉಪಯೋಗಕ್ಕೆ ಮೀಸಲಾದ ಸಿಎ (Civic Amenity) ಪಾರ್ಕ್ ಆಗಿದ್ದು, ಇದು ಬಿಬಿಎಂಪಿ ಮತ್ತು ಬಿಡಿಎ ಸ್ವತ್ತಾಗಿದೆ. 2005-06ರಲ್ಲಿ ಇಲ್ಲಿ ಡಾ. ರಾಜ್ ಕುಮಾರ್ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಅಲ್ಲದೆ, ಇಲ್ಲಿರುವ ಧ್ವಜಕಂಬವು ಪದ್ಮನಾಭ ನಗರದ ಏಕೈಕ ಕನ್ನಡ ಧ್ವಜ ಸ್ತಂಭವಾಗಿದ್ದು, ರಾಜ್ಯೋತ್ಸವ ಸೇರಿದಂತೆ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ ಎಂದು ಸಂಘ ಹೇಳಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜನ ಸೇವಾ ಸಂಘದ ಕಾರ್ಯದರ್ಶಿ ಸತೀಶ್, “ಈ ಜಾಗದ ಮೇಲ್ಮನವಿ ಅರ್ಜಿ ವಿಚಾರಣೆಗೆ ಬಾಕಿ ಇದೆ. ಆದಾಗ್ಯೂ, ಓಂ ಪ್ರಕಾಶ್ ಎಂಬುವವರು ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಕಾನೂನು ಬಾಹಿರ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ನಿವೇಶನ ಸಂಖ್ಯೆ 86ರ ಮಾಲೀಕರಾದ ಓಂ ಪ್ರಕಾಶ್ ಅವರು ತಮ್ಮ ನಿವೇಶನದಲ್ಲಿ ಮನೆ ಕಟ್ಟದೆ, ಸಿಎ ನಿವೇಶನದ ಮೇಲೆ ಕಣ್ಣಿಟ್ಟು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಬೆಳವಣಿಗೆಯಿಂದ ಡಾ. ರಾಜ್ ಅಭಿಮಾನಿಗಳು ಮತ್ತು ಕನ್ನಡಿಗರು ತೀವ್ರ ಆಕ್ರೋಶಗೊಂಡಿದ್ದು, ಬಿಡಿಎ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿ ಜಾಗದ ಯಥಾಸ್ಥಿತಿ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಸಮಸ್ಯೆ ಎಚ್ಚರಿಕೆ :
“ಡಾ. ರಾಜ್ ಪುತ್ಥಳಿಯನ್ನು ಕೆಡವಲು ಪ್ರಯತ್ನಿಸಿದರೆ ದೊಡ್ಡ ಮಟ್ಟದ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗುವುದು ಖಚಿತ. ಹಾಗಾಗಿ ಬಿಡಿಎ ಪುತ್ಥಳಿಗೆ ಸೂಕ್ತ ರಕ್ಷಣೆ ನೀಡಬೇಕು,” ಎಂದು ಸತೀಶ್ ಬಿಡಿಎ ಮತ್ತು ಸರ್ಕಾರವನ್ನು ಎಚ್ಚರಿಸಿದ್ದಾರೆ. ಕನ್ನಡದ ಅನನ್ಯ ಕೊಡುಗೆದಾರರ ಪುತ್ಥಳಿಗಳ ಮೇಲೆ ಆಗುತ್ತಿರುವ ಈ ನಿರಂತರ ದಾಳಿಯ ಪ್ರಯತ್ನಗಳು ಕನ್ನಡಿಗರ ಸಂಸ್ಕೃತಿ ಮತ್ತು ಭಾವನೆಗಳ ಮೇಲಿನ ದಾಳಿ ಎಂದು ಅಭಿಮಾನಿಗಳು ಭಾವಿಸಿದ್ದಾರೆ.























