ಬೆಂಗಳೂರು, ಸೆ.27 www.bengaluruwire.com : ನಗರದಲ್ಲಿ ಸುರಿದ ಭಾರಿ ಮಳೆಯ ನಂತರ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಸಹಸ್ರಾರು ಗುಂಡಿಗಳು ಮತ್ತು ಕಳಪೆ ತ್ಯಾಜ್ಯ ನಿರ್ವಹಣೆಯ ವಿರುದ್ಧ ಸಾರ್ವಜನಿಕರ ಆಕ್ರೋಶ ತಾರಕಕ್ಕೇರಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ದಿನಾಂಕ) ಸಿಟಿ ರೌಂಡ್ಸ್ ನಡೆಸಿ, ನಗರದ ಅವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿದರು.
ಈ ವೇಳೆ ರಸ್ತೆಗುಂಡಿ, ವೈಟ್ ಟಾಪಿಂಗ್ ಕಾಮಗಾರಿ ಮತ್ತು ತ್ಯಾಜ್ಯ ವಿಲೇವಾರಿಯಲ್ಲಿನ ಲೋಪಗಳನ್ನು ಗಮನಿಸಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಿಎಂ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆ ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಆರಂಭವಾಯಿತು. ಕೊಳಚೆ ನೀರು ಸರಿಯಾಗಿ ಹರಿಯಲು ಮೋರಿ ಇಲ್ಲದ ಕಾರಣ ರಸ್ತೆಯಲ್ಲಿ ನೀರು ನಿಲ್ಲುತ್ತಿರುವುದನ್ನು ಗಮನಿಸಿದ ಸಿಎಂ, ಕೂಡಲೇ ನೀರು ಸರಾಗವಾಗಿ ಡ್ರೈನೇಜ್ ಸೇರುವಂತೆ ವ್ಯವಸ್ಥೆ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ವಿಂಡ್ಸರ್ ಮ್ಯಾನರ್ ವೃತ್ತದ ರಸ್ತೆ ಕಾರ್ಯವನ್ನು ರಾತ್ರಿಯೊಳಗೆ ಮುಗಿಸುವಂತೆ ಗಡುವನ್ನೂ ನೀಡಿದರು.
“ರಸ್ತೆಯಲ್ಲಿ ಕಣ್ಣು ಮುಚ್ಚಿಕೊಂಡು ಓಡಾಡ್ತೀರಾ?”: ಸಿಎಂ ಪ್ರಶ್ನೆ :

ತಮ್ಮ ಪ್ರವಾಸದ ಮಾರ್ಗಮಧ್ಯೆ ರಿಂಗ್ ರಸ್ತೆಯ ಬದಿಯಲ್ಲಿ ಸಿಸಿ ಕ್ಯಾಮರಾ ಇಲ್ಲದ ಜಾಗದಲ್ಲಿ ಹಳೆಯ ಕಟ್ಟಡ ತ್ಯಾಜ್ಯ ಸುರಿದಿರುವುದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ತಕ್ಷಣ ತಮ್ಮ ಕಾರು ನಿಲ್ಲಿಸಿ ಕೆಳಗಿಳಿದರು. ಘನ ತ್ಯಾಜ್ಯ ರಸ್ತೆಗೆ ಚೆಲ್ಲಿದ್ದಕ್ಕೆ ಗರಂ ಆದ ಅವರು, ತ್ಯಾಜ್ಯ ಸುರಿದವರನ್ನು ಪತ್ತೆ ಹಚ್ಚಿ ಅವರ ವಾಹನವನ್ನು ಸೀಜ್ ಮಾಡಿ, ಕೇಸು ದಾಖಲಿಸುವಂತೆ ಸೂಚಿಸಿದರು.
ಅಲ್ಲದೆ, “ಅಧಿಕಾರಿಗಳೇನು ರಸ್ತೆಯಲ್ಲಿ ಕಣ್ಣು ಮುಚ್ಚಿಕೊಂಡು ಓಡಾಡ್ತೀರಾ? ರಸ್ತೆಗೆ ತ್ಯಾಜ್ಯ ಸುರಿದಿರುವುದನ್ನು ಗಮನಿಸೋಕೆ ಆಗೋದಿಲ್ಲವಾ?” ಎಂದು ಬಿಬಿಎಂಪಿ, ಬಿಡಿಎ ಮತ್ತು ಸಂಚಾರ ಪೊಲೀಸರನ್ನು ಖಾರವಾಗಿ ಪ್ರಶ್ನಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ಮೆಟ್ರೋ ಕಾಮಗಾರಿ ನಿರ್ಲಕ್ಷ್ಯ, ವೈಟ್ ಟಾಪಿಂಗ್ ರಸ್ತೆ ದುರಸ್ತಿ ಸೂಚನೆ :

ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಲಕ್ಷಿಸಿರುವುದು, ರಸ್ತೆ ಬದಿ ನೀರು ನಿಲ್ಲುವಂತೆ ಮಾಡಿರುವುದು ಮತ್ತು ವೈಟ್ ಟಾಪಿಂಗ್ ರಸ್ತೆ ಹಾಳಾಗಿರುವ ಬಗ್ಗೆ ಅಧಿಕಾರಿಗಳು ಸಿಎಂ ಗಮನಕ್ಕೆ ತಂದರು. ಈ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ತಕ್ಷಣವೇ ಹಾಳಾಗಿರುವ ರಸ್ತೆಗಳ ದುರಸ್ತಿ ಹಾಗೂ ಸರ್ವೀಸ್ ರಸ್ತೆಗಳ ನಿರ್ವಹಣೆಗೆ ಸೂಚನೆ ನೀಡಿದರು.
“ಎಷ್ಟು ವರ್ಷದ ಹಳೆ ಕಸ ಇದು? ಕಣ್ಣಿಲ್ವಾ ನಿಮಗೆ?” :

ಹೆಣ್ಣೂರು ಫ್ಲೈಓವರ್ ಕೆಳಗೆ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದಿದ್ದು, ಅದರ ಮಧ್ಯೆ ತಲೆ ಎತ್ತರಕ್ಕೆ ಗಿಡಗಳು ಬೆಳೆದು ನಿಂತಿರುವುದನ್ನು ಕಂಡು ಸಿಎಂ ಆಶ್ಚರ್ಯಚಕಿತರಾದರು. “ಇದು ತುಂಬಾ ಹಳೆಯ ತ್ಯಾಜ್ಯ. ಇಷ್ಟು ವರ್ಷ ಎಷ್ಟು ಜನ ಅಧಿಕಾರಿಗಳು ಇಲ್ಲಿ ಓಡಾಡಿರುತ್ತೀರಿ. ಯಾರಿಗೂ ಕಣ್ಣಿಗೇ ಬಿದ್ದಿಲ್ವಾ?” ಎಂದು ಪ್ರಶ್ನಿಸಿ 24 ಗಂಟೆಗಳ ಒಳಗೆ ತ್ಯಾಜ್ಯ ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದರು.
ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ನೋಟಿಸ್:
ವಾರ್ಡ್ ನಂಬರ್ 23ರ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಒಳಗೆ ಇರಬೇಕಾದ ತ್ಯಾಜ್ಯ ಹೊರಗೆ ರಾಶಿ ಬಿದ್ದಿರುವುದನ್ನು ಗಮನಿಸಿದ ಸಿಎಂ ಸಿಟ್ಟಾದರು. ಕೇಂದ್ರದ ಒಳಗೆ ಜಾಗ ಖಾಲಿ ಇದ್ದರೂ ಹೊರಗೆ ತ್ಯಾಜ್ಯ ಹಾಕಿದ್ದಕ್ಕಾಗಿ ಬಿ ಸ್ಮೈಲ್ ನಿರ್ದೇಶಕರಾದ ಪ್ರಹ್ಲಾದ್ ಅವರಿಗೆ ನೋಟಿಸ್ ನೀಡಲು ಸೂಚಿಸಿದರು.

ಅದೇ ರೀತಿ, ಕೆಲವೇ ದೂರದಲ್ಲಿ ರಸ್ತೆಯಲ್ಲಿ ಜೆಲ್ಲಿ ಕಲ್ಲುಗಳು ಬಿದ್ದಿರುವುದನ್ನು ಗಮನಿಸಿ, ಇದಕ್ಕೆ ಕಾರಣರಾದ ಇಂಜಿನಿಯರ್ ರಾಘವೇಂದ್ರ ಪ್ರಸಾದ್ ಅವರಿಗೂ ನೋಟಿಸ್ ನೀಡುವಂತೆ ಆದೇಶಿಸಿದರು.
ಹೆಣ್ಣೂರಿನ ಬಾಗಲೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದಕ್ಕೆ ಸಿಎಂ ಗಮನ ಸೆಳೆಯಲಾಯಿತು. ಒಪ್ಪಂದದ ಪ್ರಕಾರ ವೈಟ್ ಟಾಪಿಂಗ್ ಮುಗಿಯುವವರೆಗೂ ರಸ್ತೆ ನಿರ್ವಹಣೆಯ ಜವಾಬ್ದಾರಿ ಗುತ್ತಿಗೆದಾರರ ಮೇಲಿರುತ್ತದೆ. ಸಮರ್ಪಕ ನಿರ್ವಹಣೆ ಮಾಡದ ವೈಟ್ ಟಾಪಿಂಗ್ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಎಂಜಿನಿಯರ್‌ಗಳ ವಿರುದ್ಧ ಕ್ರಮಕ್ಕೆ ಸಿಎಂ ಸೂಚಿಸಿದರು.























