ಮಂಡ್ಯ, ಸೆ. 26 www.bengaluruwire.com : ಇದೇ ಪ್ರಥಮ ಬಾರಿಗೆ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಾವೇರಿ ನದಿಗೆ ದಸರಾ ಹಬ್ಬ ನಡೆಯುವ ಸಂದರ್ಭದಲ್ಲಿಯೇ ಇಂದು ಸಂಜೆ (ಸೆ.26) ಯಿಂದ ಐದು ದಿನಗಳ ಕಾಲ ಕೆಆರ್ ಎಸ್ ನ ಬೃಂದಾವನ ಉದ್ಯಾನವನದಲ್ಲಿ “ಕಾವೇರಿ ಆರತಿ” ಕಾರ್ಯಕ್ರಮ ನೆರವೇರಲಿದೆ.
ಕಾವೇರಿ ಆರತಿ ಕಾರ್ಯಕ್ರಮದ ವೀಕ್ಷಣೆಗೆ ಪ್ರತಿ ನಿತ್ಯ 8 ರಿಂದ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ರಾಜ್ಯ, ಹೊರರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ “ಕಾವೇರಿ ಆರತಿ”ಯನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಕಾವೇರಿ ಆರತಿ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಉಚಿತವಾಗಿ ಲಾಡು ಹಂಚಲಾಗುತ್ತದೆ. ಇದಕ್ಕಾಗಿ ಈಗಾಗಲೇ ಸಾವಿರಾರು ಲಾಡುಗಳನ್ನು ಸಿದ್ದಪಡಿಸಲಾಗಿದೆ. ಇಂದು ಸಂಜೆಯಿಂದ ಅರಂಭವಾಗುವ “ಕಾವೇರಿ ಆರತಿ” ಕಾರ್ಯಕ್ರಮಕ್ಕೆ ಇಡೀ ಕೆಆರ್ ಎಸ್ ಜಲಾಶಯ ಬೆಳಕಿನ ಅಲಂಕಾರಗಳಿಂದ ಕಂಗೊಳಿಸುತ್ತಿದೆ. ಆ ನಾಡಹಬ್ಬ ದಸರಾ ನಡೆಯುವ ಹೊತ್ತಿನಲ್ಲಿ ಮೈಸೂರಿಗೆ ಬಂದ ಪ್ರವಾಸಿಗರು ಕೆಆರ್ ಎಸ್ ಗೂ ಭೇಟಿ ನೀಡಿ “ಕಾವೇರಿ ಆರತಿ” ವೀಕ್ಷಿಸಲು ಅಗತ್ಯವಾದ ಸಿದ್ಧತೆ, ಬಂದೋಬಸ್ತ್ ಗಳನ್ನು ಮಾಡಲಾಗಿದೆ.
ಇಂದು ಸಂಜೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ “ಕಾವೇರಿ ಆರತಿ” ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ.


ಕಾವೇರಿ ಕನ್ನಡ ನಾಡಿನ ಜೀವನದಿ. ಕೇರಳ, ತಮಿಳುನಾಡು ಹಾಗೂ ರಾಜ್ಯದ ನಾನಾ ಭಾಗಗಳಿಂದ ಕೆಆರ್ ಎಸ್ ವೀಕ್ಷಣೆಗೆ ದಿನಂಪ್ರತಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕಾವೇರಿ ಆರತಿ ವೀಕ್ಷಿಸಲು ಆಗಮಿಸಲಿದ್ದಾರೆ. ಹೀಗಾಗಿ ಅವರಿಗೆ ಲಾಡು ವಿತರಣೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನ ಸ್ಯಾಂಕಿಟ್ಯಾಂಕ್ ಕೆರೆಯಲ್ಲಿ ಕೆಲವು ತಿಂಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ಜಲಮಂಡಳಿ ವತಿಯಿಂದ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಿದ್ದರು.
ಸ್ಥಳೀಯ ಸಂಪ್ರದಾಯಗಳನ್ನು ಒಳಗೊಂಡ ಕಾವೇರಿ ಆರತಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ನೆರವೇರುತ್ತಿದ್ದು, ಇದಕ್ಕೆ ಕೃಷ್ಣರಾಜಸಾಗರ ಸಾಕ್ಷಿಯಾಗಲಿದೆ.























