ಗಾಜಿಯಾಬಾದ್, ಸೆ.26 www.bengaluruwire.com : ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ವ್ಯಸನ ಮುಕ್ತಿ ಕೇಂದ್ರವೊಂದರಲ್ಲಿ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
35 ವರ್ಷದ ಹಾಪುರ್ ನಿವಾಸಿ ಸಚಿನ್ ಎಂಬ ವ್ಯಕ್ತಿಯನ್ನು ಆತನ ಕುಟುಂಬಸ್ಥರು ಹಾಪುರ್‌ನ ಡಿ ಅಡಿಕ್ಷನ್ ಸೆಂಟರ್‌ಗೆ ಸೇರಿಸಿದ್ದರು, ಇದರಿಂದ ಆತ ಕೋಪದಿಂದ ಇರುತ್ತಿದ್ದ.ಅಲ್ಲದೇ ಅಲ್ಲಿ ರೋಗಿಗಳಿಗೆ ನೀಡಲಾಗುತ್ತಿದ್ದ ಆಹಾರವು ಕಡಿಮೆ ಪ್ರಮಾಣದಲ್ಲಿರುತ್ತಿತ್ತು.
ಹೀಗಾಗಿ ಆತನ ಕೋಪ ಮತ್ತಷ್ಟು ಹೆಚ್ಚಾಗಿ ಸ್ಟೀಲ್ ಚಮಚಗಳನ್ನು, ಟೂತ್‌ಬ್ರಶ್ ಮತ್ತು ಪೆನ್ ಗಳನ್ನು ಕದ್ದು ನುಂಗಿದ್ದ. ಸ್ವಲ್ಪ ದಿನಗಳ ಬಳಿಕ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಎಕ್ಸ್ ರೇ ಮತ್ತು ಸಿಟಿ ಸ್ಕ್ಯಾನ್‌ಗಳ ಮೂಲಕ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆತನ ಹೊಟ್ಟೆಯಲ್ಲಿ 29 ಸ್ಟೀಲ್ ಚಮಚ, 19 ಟೂತ್‌ಬ್ರಶ್ ಮತ್ತು 2 ಪೆನ್ ಪತ್ತೆಯಾಗಿವೆ. ಬಳಿಕ, ಇವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.
ವ್ಯಸನದಿಂದ ಬಳಲುತ್ತಿದ್ದ ರೋಗಿಯೊಬ್ಬನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಈತ ಈ ವಸ್ತುಗಳನ್ನು ನುಂಗಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಆತ ಬಳಲುತ್ತಿದ್ದಾಗ, ವೈದ್ಯರು ಎಕ್ಸ್-ರೇ ತೆಗೆದು ನೋಡಿದಾಗ, ಹೊಟ್ಟೆಯೊಳಗಿನ ವಸ್ತುಗಳನ್ನು ಕಂಡು ದಿಗ್ಭ್ರಮೆಗೊಂಡರು.

ತಕ್ಷಣವೇ ವೈದ್ಯಕೀಯ ತಂಡ ಸಜ್ಜಾಗಿ, ಹಲವಾರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರು. ಯಾವುದೇ ಆಂತರಿಕ ಅಂಗಗಳಿಗೆ ಹಾನಿಯಾಗದಂತೆ ಮೂರೂ ವಸ್ತುಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಸದ್ಯ, ಆತನ ಆರೋಗ್ಯ ಸ್ಥಿರವಾಗಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.
ಇಂತಹ ಘಟನೆಗಳು ಬಹಳ ಅಪರೂಪವಾಗಿದ್ದು, ಈ ರೀತಿ ಚೂಪಾದ ಮತ್ತು ಗಟ್ಟಿಯಾದ ವಸ್ತುಗಳನ್ನು ನುಂಗುವುದು ರೋಗಿಯ ಜೀವಕ್ಕೆ ಮಾರಕವಾಗಬಲ್ಲದು. ಆದ್ದರಿಂದ, ವ್ಯಸನ ಮುಕ್ತಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ನಿರಂತರ ಮಾನಸಿಕ ಮೇಲ್ವಿಚಾರಣೆ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ.























