ಬೆಂಗಳೂರು: ಸೆ.25 www.bengaluruwire.com : ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ)ಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲಾದ ಶಿಕ್ಷಕರು ಮತ್ತು ಗಣತಿದಾರರು, ತಾಂತ್ರಿಕ ಸಮಸ್ಯೆಗಳು ಮತ್ತು ಸಮೀಕ್ಷೆಯ ನಿರ್ವಹಣೆಯಲ್ಲಿನ ಗೊಂದಲಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವವರೆಗೂ ಸಮೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸಿದ್ದಾರೆ.
ಕಲಬುರಗಿಯಲ್ಲಿ ಗಣತಿದಾರರಿಂದ ಪ್ರತಿಭಟನೆ:

ಗುರುವಾರ, ಕಲಬುರಗಿಯಲ್ಲಿ ನೂರಾರು ಗಣತಿದಾರರು ತಾಪಂ ಕಚೇರಿಯ ಮುಂದೆ ಜಮಾಯಿಸಿ ತಮ್ಮ ಅಸಮಾಧಾನ ಹೊರಹಾಕಿದರು. ಅರವತ್ತು ಪ್ರಶ್ನೆಗಳನ್ನು ಒಳಗೊಂಡಿರುವ ಸಮೀಕ್ಷೆಯನ್ನು ಆ್ಯಪ್‌ನಲ್ಲಿ ಭರ್ತಿ ಮಾಡಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದೆ ಮತ್ತು ಸಬ್‌ಮಿಟ್ ಮಾಡುವಾಗ ಪದೇಪದೇ ‘ಎರರ್’ ಬರುತ್ತಿದೆ ಎಂದು ಅವರು ದೂರಿದ್ದಾರೆ. ಇದರಿಂದ ಅವರ ಶ್ರಮ ವ್ಯರ್ಥವಾಗುತ್ತಿದೆ. ಸರ್ಕಾರ ಸರಿಯಾದ ಸಿದ್ಧತೆ ಇಲ್ಲದೆ ಸಮೀಕ್ಷೆ ಕೈಗೊಂಡಿರುವುದು ಈ ಸಮಸ್ಯೆಗಳಿಗೆ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಆ್ಯಪ್‌ನಲ್ಲಿ ಮನೆಗಳ ಲೊಕೇಶನ್ ತಪ್ಪಾಗಿ ತೋರಿಸುತ್ತಿರುವುದು ಕೂಡಾ ಗೊಂದಲಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಾಗಲಕೋಟೆಯಲ್ಲೂ ಇದೇ ಪರಿಸ್ಥಿತಿ:

ಬಾಗಲಕೋಟೆ ಜಿಲ್ಲೆಯಲ್ಲಿಯೂ ಶಿಕ್ಷಕರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮನೆಗಳ ವಿಳಾಸ, ವಾರ್ಡ್‌ಗಳು ಸರಿಯಾಗಿ ನಮೂದಾಗಿಲ್ಲ. ಕೆಲವು ಶಿಕ್ಷಕರಿಗೆ ಬೇರೆ ಬೇರೆ ಪಟ್ಟಣ, ವಾರ್ಡ್ ಗಳಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದು, ಪ್ರಯಾಣಿಸಲು ಕಷ್ಟವಾಗುತ್ತಿದೆ. ಹೊಸ ವರ್ಷನ್ ಆ್ಯಪ್ ತೆರೆಯಲು ಆಗುತ್ತಿಲ್ಲ, ಸಮೀಕ್ಷೆ ಮಾಡಿದರೂ ಸಬ್‌ಮಿಟ್ ಆಗುತ್ತಿಲ್ಲ, ಯುಎಚ್‌ಐಡಿ ನಂಬರ್‌ಗಳ ಕೊರತೆ ಮತ್ತು ಕೆಲವು ಶಿಕ್ಷಕರಿಗೆ ಸ್ಮಾರ್ಟ್‌ಫೋನ್ ಬಳಕೆ ಗೊತ್ತಿಲ್ಲದಿರುವುದು ಕೂಡಾ ಸಮೀಕ್ಷಾ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿ:
ಶಿಕ್ಷಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಹೀಗಿವೆ:
* ಆ್ಯಪ್ ತೆರೆಯಲು ಆಗದೆ ‘ಅನ್‌ನೋನ್ ಎರರ್’ ಸಂದೇಶ.
* ನಿಗದಿಪಡಿಸಿದ ಮನೆಗಳು ಲೊಕೇಶನ್‌ನಲ್ಲಿ ಸಿಗದಿರುವುದು.
* ಮನೆ ಸಮೀಕ್ಷೆ ಸಬ್‌ಮಿಟ್ ಆಗದೆ ಇರುವುದು.
* ಒಟಿಪಿ ಮತ್ತು ಒಡಿಪಿ ಸಮಸ್ಯೆ.
* ಅನಾರೋಗ್ಯ ಮತ್ತು ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರ ನಿಯೋಜನೆ.
* ಮೇಲ್ವಿಚಾರಕರಿಗೆ ತರಬೇತಿ ಇಲ್ಲದಿರುವುದು ಮತ್ತು ಸೂಕ್ತ ಸಹಾಯವಾಣಿ ಲಭ್ಯವಿಲ್ಲದಿರುವುದು.
* ಸ್ಮಾರ್ಟ್‌ಫೋನ್ ಕೊರತೆ ಮತ್ತು ಅದರ ಬಳಕೆ ತಿಳಿಯದಿರುವುದು.
ದಸರಾ ಹಬ್ಬದ ಸಮಯದಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸದೆ ಸಮೀಕ್ಷೆ ನಡೆಸುವುದು ಸರಿಯಲ್ಲ, ಹಬ್ಬದ ನಂತರ ಸಮೀಕ್ಷೆ ಮುಂದುವರಿಸಬೇಕು ಎಂದು ಶಿಕ್ಷಕರು ಮನವಿ ಮಾಡಿದ್ದಾರೆ.
ಸರ್ಕಾರದಿಂದ ಎಚ್ಚರಿಕೆ ಮತ್ತು ಸಭೆ:
ಇದೇ ವೇಳೆ, ಸರ್ಕಾರದ ಸಚಿವ ಸಂಪುಟ ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು, ಸಮೀಕ್ಷಾ ಕಾರ್ಯದಿಂದ ತಪ್ಪಿಸಿಕೊಳ್ಳುವ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 27ರಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ವ್ಯಾಪ್ತಿಯಲ್ಲಿ ಸಮೀಕ್ಷೆಗೆ ಹಾಜರಾಗದ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.
ಜಾತಿ ಗಣತಿಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ :
ಹೈಕೋರ್ಟ್ ಜಾತಿ ಗಣತಿ ತಡೆಯಾಜ್ಞೆ ನೀಡಲು ನಿರಾಕರಿಸಿದೆ ಆದರೆ, ಕೆಲವು ಷರತ್ತುಗಳನ್ನು ವಿಧಿಸಿದೆ. ಅವುಗಳು ಹೀಗಿವೆ:
* ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ.
* ಜನರು ಮಾಹಿತಿ ನೀಡಬೇಕು ಎಂದು ಸಮೀಕ್ಷೆ ನಡೆಸುವವರು ಒತ್ತಾಯ ಮಾಡುವಂತಿಲ್ಲ.
* ಸಂಗ್ರಹಿಸಿದ ದತ್ತಾಂಶವನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಹೊರತುಪಡಿಸಿ ಯಾರಿಗೂ ಬೇರೆಡೆಗೆ ವರ್ಗಾಯಿಸುವಂತಿಲ್ಲ.
* ಈ ಷರತ್ತುಗಳಿಗೆ ಬದ್ಧ ಎಂದು ಹಿಂದುಳಿದ ಆಯೋಗವು ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಬೇಕು.
* ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ/ಸ್ವಯಂಪ್ರೇರಿತ ಎಂಬುದರ ಬಗ್ಗೆ ಸರ್ಕಾರವು ಸಾರ್ವಜನಿಕವಾಗಿ ಪ್ರಕಟಣೆ ನೀಡಬೇಕು.























